ಬೆಂಗಳೂರು:ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಹಾಗೂ ಸ್ನೇಹಿತರು ಯುವಕನ ಮೇಲೆ ರಸ್ತೆಯಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ದಾರ್ಥ್ ಎಂಬಾತ ಹಲ್ಲೆಗೊಳಗಾದ ಯುವಕ.
ಸಾಮಾಜಿಕ ಜಾಲತಾಣದಲ್ಲಿ ಮೆಸ್ಸೇಜ್ ಮಾಡಿದ್ದ ಯುವಕ.. ಇನ್ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಸಿದ್ದಾರ್ಥ್ ಒಂದು ವರ್ಷದಿಂದ ಯುವತಿಯೊಬ್ಬಳಿಗೆ ಮೆಸ್ಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಮೆಸ್ಸೇಜ್ ಮಾಡುತ್ತಿರುವುದು ಯುವತಿಯಲ್ಲ, ಯುವಕ ಎಂಬ ಅಸಲಿ ವಿಷಯ ತಿಳಿದ ಆ ಯುವತಿ ತನ್ನ ಸಹೋದರ ಚೇತನ್ ಬಳಿ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಚೇತನ್, ಸಿದ್ದಾರ್ಥ್ಗೆ ಕರೆ ಮಾಡಿ ನಿಂದಿಸಿ ಭೇಟಿಯಾಗುವಂತೆ ತಿಳಿಸಿದ್ದಾನೆ. ಅದರಂತೆ ಫೆ. 5ರಂದು ಸಿದ್ದಾರ್ಥ್ ವಾಸವಿದ್ದ ಪಿಜಿ ಬಳಿ ತನ್ನ ಗೆಳೆಯರೊಂದಿಗೆ ಬಂದಿದ್ದ ಚೇತನ್, ಯುವಕನ ಬಳಿ ಜಗಳ ಆರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು : ಬಳಿಕ ಯುವಕನ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಚಾಕುವಿನಿಂದ ಸಿದ್ದಾರ್ಥ್ ಮೇಲೆ ಹಲ್ಲೆ ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಾರ್ಥ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಗೋವಿಂದರಾಜನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.