ಬೆಂಗಳೂರು:ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟದೇ ಓಡಾಡುವ ವಾಹನ ಸವಾರರ ಕಡಿವಾಣಕ್ಕೆ ಮುಂದಾಗುತ್ತಿರುವ ಟ್ರಾಫಿಕ್ ಪೊಲೀಸರು ವಾಹನಗಳ ಮೇಲಿರುವ ಬಾಕಿ ದಂಡ ಪಾವತಿಸಿದರೆ ಮಾತ್ರ ಫಿಟ್ನೆಸ್ ಸರ್ಟಿಫಿಕೇಟ್ ಹಾಗೂ ಇನ್ಶುರೆನ್ಸ್ ನವೀಕರಣ ಪ್ರಮಾಣಪತ್ರ ನೀಡಲು ಆರ್ಟಿಒ ಹಾಗೂ ವಿಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ವರ್ಷಕ್ಕೆ ಲಕ್ಷಾಂತರ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಸಂಚಾರ ನಿಯಮಗಳ ಉಲ್ಲಂಘನೆಗಳಿಂದ ಅಪಘಾತ ಪ್ರಕರಣಗಳ ಸಂಖ್ಯೆ ಅಧಿಕಗೊಂಡಿವೆ.
ನಿಯಮ ಪಾಲನೆ ಜೊತೆಗೆ ಸವಾರರಿಂದ ದಂಡ ಪಾವತಿಗಾಗಿ ನೂತನ ಪ್ಲ್ಯಾನ್ ಮಾಡಿರುವ ಪೊಲೀಸರು ಎಫ್ಸಿ ನವೀಕರಣ ಹಾಗೂ ಇನ್ಯೂರೆನ್ಸ್ಗಾಗಿ ಬರುವ ಎಲ್ಲ ರೀತಿಯ ವಾಹನಗಳು ಕಡ್ಡಾಯವಾಗಿ ದಂಡ ಪಾವತಿಸಿದಾಗ ಮಾತ್ರ ಆರ್ಟಿಒ ಹಾಗೂ ಟ್ರಾಫಿಕ್ ಪೊಲೀಸರು ಪ್ರಮಾಣಪತ್ರ ನೀಡಲಿದ್ದಾರೆ. ದಂಡ ಪಾವತಿಸದೇ ಬಾಕಿಯಿದ್ದರೆ ಎಫ್ಸಿ ಹಾಗೂ ಇನ್ಶೂರೆನ್ಸ್ ನವೀಕರಣ ಪತ್ರ ನೀಡದಂತೆ ಸಾರಿಗೆ ಇಲಾಖೆ ಹಾಗೂ ವಿಮಾ ಕಂಪೆನಿಗಳ ಪೊಲೀಸರು ಮಾತುಕತೆ ನಡೆಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬರಲಿದೆ.