ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ಗೆ ವಿಶ್ವ ಹಿಂದೂ ಪರಿಷತ್ ತಿರುಗೇಟು ನೀಡಿದೆ. ಮಾನ್ಯ ಸ್ವಯಂ ಘೋಷಿತ ಮಾತೃ ಹೃದಯಿ ಕುಮಾರಸ್ವಾಮಿಯವರೇ, ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿದ್ದೀರಿ. ಕಳೆದ ಬಾರಿ ತಾವು ಯಾವ ಸಹೋದರರ ಮತಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗೂ ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವಂತೆ ಕಾಣಿಸುತ್ತಿದೆ ಎಂದು ಟೀಕಿಸಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಸರಣಿ ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ ಕುಮಾರಸ್ವಾಮಿ ಕೂಡ ಸರಣಿ ಟ್ವೀಟ್ಗಳ ಮೂಲಕ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು. ವಿಶ್ವ ಹಿಂದೂ ಪರಿಷತ್, ವಿಶ್ವ ವಿನಾಶಕ ಪರಿಷತ್ ಅಥವಾ ʼಧರ್ಮ ವಿನಾಶಕ ಪರಿಷತ್ʼ ಆಗುವುದು ಬೇಡ. ಭಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೆ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದರು.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಹೌದು, ನಿಮ್ಮ ಕರ್ನಾಟಕ ನಿಮ್ಮ ಜಹಂಗೀರಲ್ಲವೆಂಬುದನ್ನು ತಾವು ಮರೆಯಬಾರದು. ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗ ತಮಗೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನಿಸಲಿಲ್ಲವೇ ಎಂದು ವಿಹೆಚ್‌ಪಿ ಪ್ರಶ್ನಿಸಿದೆ.
ಯಾವುದು ನೆಮ್ಮದಿಯ ಮನಸ್ಸುಗಳನ್ನು ಕೆಡಿಸುವುದು ಕುಮಾರಸ್ವಾಮಿಯವರೇ. ಹಿಜಾಬ್ ಆದೇಶವನ್ನು ಧಿಕ್ಕರಿಸಿ ಬಂದ್ಗೆ ಕರೆ ನೀಡುವುದಾ? ಅಥವಾ ಹಿಜಾಬ್ ಇಸ್ಲಾಂ ಅಂಗವಲ್ಲವೆಂದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕುವುದಾ? ಎಂದು ಪ್ರಶ್ನಿಸಿದ್ದಾರೆ.