ಬೆಂಗಳೂರು :ಸರ್ಕಾರಿ ಅಧಿಕಾರಿಯಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ್ ನ್ಯಾಮಗೌಡ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ನ್ಯಾಮಗೌಡ (ಪ್ರಸ್ತುತ ತುಮಕೂರು ಜಿಲ್ಲೆಯ ತಿಪಟೂರಿನ ಎಪಿಎಂಸಿ ಕಾರ್ಯದರ್ಶಿ) ತಮ್ಮ ವಿರುದ್ಧದ ಪ್ರಕರಣ ಕೈಬಿಡುವುದಕ್ಕೆ ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯಪೀಠ, ಮೇಲ್ನೋಟಕ್ಕೆ ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿದೆ. ಜೊತೆಗೆ, ಯೋಗೇಶ್ ಗೌಡ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳು ರೂಪಿಸಿರುವ ಸಂಚಿನ ಕುರಿತು ಅರ್ಜಿದಾರರಿಗೆ ಅರಿವಿತ್ತು ಎಂದು ವಿಶೇಷ ನ್ಯಾಯಾಲಯ ತಿಳಿಸಿದೆ. ಅಲ್ಲದೇ, ಶ್ರೀನಿವಾಸ ರೆಡ್ಡಿ ಮತ್ತು ರಾಕೇಶ್ ಶರ್ಮಾ ಮತ್ತಿತರರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ, ಸರ್ಕಾರಿ ನೌಕರರಿಗಿರುವ ರಕ್ಷಣೆಯನ್ನು ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಸುಳ್ಳು ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸುವುದು ಯೋಗೇಶ್ ಗೌಡರ ಕೊಲೆಗೆ ಸಂಚು ರೂಪಿಸಿರುವ ಭಾಗವಾಗಿದೆ. ಜೊತೆಗೆ ಎಲ್ಲ ಕಾರ್ಯಗಳನ್ನು ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಅವರ ಸೂಚನೆಯಂತೆ ನಡೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಈ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠವು ಆದೇಶದಲ್ಲಿ ಹೇಳಿದೆ.