ಬೆಂಗಳೂರು : ಬಿಜೆಪಿ ಮುಖಂಡ ಯೋಗೇಶ್‌ಗೌಡ ಕೊಲೆ ಪ್ರಕರಣದ ಸಂಬಂಧ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಬೇಕೆಂಬ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ನನ್ನ ವಿರುದ್ಧ ಹೊರಿಸಲಾಗಿರುವ ದೋಷಾರೋಪಣೆ ಮತ್ತು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿ, ವಿನಯ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿದೆ.
ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಕೀಲ, ವಿಚಾರಣಾ ನ್ಯಾಯಾಲಯ ತನ್ನ ಪ್ರಕ್ರಿಯೆ ಆರಂಭಿಸಲು ಇದೇ 29ರ ದಿನಾಂಕ ನಿಗದಿಗೊಳಿಸಿದೆ. ಇದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು. ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ನ್ಯಾಯಪೀಠ, ಪ್ರತಿವಾದಿ ಸಿಬಿಐಗೆ ನೊಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.