ಬೆಂಗಳೂರು : ಸದಾ ಒತ್ತಡ, ಜಂಜಾಟದಲ್ಲಿರುವ ರಾಜಕಾರಣಿಗಳಿಗೆ ನಿರಂತರವಾಗಿ ಯೋಗಾಭ್ಯಾಸ ಮತ್ತು ಯೋಗ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಸಭಾಪತಿಗಳೊಂದಿಗೆ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದ ಚಾಮರ ವಜ್ರದಲ್ಲಿಂದು ನಡೆದ 'ಯೋಗ ರತ್ನ-2023' ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ 12 ವರ್ಷಗಳಿಂದ ವಿಶ್ವಾದ್ಯಂತ ಯೋಗ ಪ್ರಚಾರ ಮಾಡುತ್ತಿರುವ ಖ್ಯಾತ ಶ್ವಾಸಗುರು ವಚನಾನಂದ ಸ್ವಾಮೀಜಿ ನೇತೃತ್ವದ ಶ್ವಾಸ ಯೋಗ ಸಂಸ್ಥೆಯಿಂದ ಕೊಡಮಾಡುವ 'ಯೋಗ ರತ್ನ-2023' ಪ್ರಶಸ್ತಿಗಳನ್ನು ಸಚಿವರು ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಯೋಗ ಪ್ರತಿಯೊಬ್ಬರಿಗೂ ಅಗತ್ಯ. ವಿಶೇಷವಾಗಿ ರಾಜಕಾರಣಿಗಳಿಗೆ ಇದರ ಅಗತ್ಯತೆ ಹೆಚ್ಚಿದೆ.
ದೈನಂದಿನ ಜೀವನ ಶೈಲಿಗೆ ಯೋಗ ಪೂರಕವಾಗಿದೆ. ಯೋಗದಿಂದ ವ್ಯಾಪಕ ಪ್ರಯೋಜನಗಳಿವೆ. ಯೋಗ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿದೆ. ಇದಕ್ಕೆ ಜನರ ಸಹಕಾರವೂ ಅಗತ್ಯ. ಶಾಸಕರಿಗೆ ಯೋಗ ಶಿಕ್ಷಣ ನೀಡುವ ಸಂಬಂಧ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತೀಯ ಯೋಗಕ್ಕೆ ಸಹಸ್ರಾರು ವರ್ಷಗಳ ಇತಿಹಾಸ, ಭವ್ಯ ಪರಂಪರೆಯಿದೆ. ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು, ನ್ಯೂಯಾರ್ಕ್‌ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 180ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಯೋಗಾಸನ ಮಾಡಲಿದ್ದಾರೆ ಎಂದರು.