ಬೆಂಗಳೂರು: ಅನಾರೋಗ್ಯದಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಸ್ಪತ್ರೆಯಲ್ಲಿ ಯೋಗದ ಮೊರೆ ಹೋಗಿದ್ದು, ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದಾರೆ.
ಯೋಗಾಭ್ಯಾಸ, ಪುಸ್ತಕ ಓದು: ಇದು ಆಸ್ಪತ್ರೆಯಲ್ಲಿ ದೇವೇಗೌಡರ ದಿನಚರಿ - Yoga at the hospital by DeveGowda
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಮ್ಮ ಪತ್ನಿಗೆ ಕೊರೊನಾ ತಗುಲಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿದ್ದಾರೆ. ತಮ್ಮ ಎಂದಿನ ದಿನಚರಿಯಂತೆ ಯೋಗಾಭ್ಯಾಸ ಮಾಡುತ್ತಿರುವ ಗೌಡರು ಪುಸ್ತಕಗಳನ್ನು ಓದಿ ಕಾಲ ಕಳೆಯುತ್ತಿದ್ದಾರೆ.
ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಮಣಿಪಾಲ್ ಆಸ್ಪತ್ರೆಗೆ ಪತ್ನಿ ಜೊತೆ ಸ್ವತಃ ದೇವೇಗೌಡರೂ ದಾಖಲಾಗಿದ್ದಾರೆ. ಕೊರೊನಾ ನೆಗೆಟಿವ್ ವರದಿ ಬಂದಿದ್ದರೂ ವೈದ್ಯರ ಸಲಹೆ ಮೇರೆಗೆ ಕೆಲ ದಿನ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾದ ಕಾರಣ ಯೋಗಾಭ್ಯಾಸದ ಮೊರೆ ಹೋಗಿದ್ದಾರೆ.
ಬೆಳಗ್ಗೆ 6 ಗಂಟೆಗೆ ಎದ್ದು ಆಸ್ಪತ್ರೆಯಲ್ಲೇ ಯೋಗ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೊತೆಗೆ ಆಧ್ಯಾತ್ಮ ಸೇರಿದಂತೆ ಕೆಲವು ಪುಸ್ತಕಗಳನ್ನು ಆಸ್ಪತ್ರೆಗೆ ತರಿಸಿಕೊಂಡಿರುವ ಮಾಜಿ ಪ್ರಧಾನಿ, ಬೆಳಗ್ಗೆಯಿಂದ ಪುಸ್ತಕ ಓದುತ್ತಾ ಸಮಯ ಕಳೆಯುತ್ತಿದ್ದಾರೆ. ಇಂದು ದೇವೇಗೌಡರಿಗೆ ವೈದ್ಯರಿಂದ ರೊಟೀನ್ ಚೆಕಪ್ ಮಾಡಲಾಗಿದ್ದು,ಪತ್ನಿ ಚೆನ್ನಮ್ಮಗೆ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.