ಬೆಂಗಳೂರು:ಯಶವಂತಪುರ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಮತಗಟ್ಟೆಗಳಿಂದ ಮತಯಂತ್ರಗಳನ್ನು ಆರ್.ವಿ. ಕಾಲೇಜಿನ ಸ್ಟ್ರಾಂಗ್ ರೂಂಗೆ ಕೊಂಡೊಯ್ಯಲಾಗಿದೆ.
ಮತದಾನ ಪ್ರಕ್ರಿಯೆ ಅಂತ್ಯಗೊಳ್ಳುವ ವೇಳೆ ಯಶವಂತಪುರ ಸಮರದಲ್ಲಿ ಶೇ. 55ರಷ್ಟು ಮತದಾನ ಆಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಶೇ. 58ರಷ್ಟು ಮತದಾನ ಆಗಿತ್ತು.
ಮತದಾನದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್, ಕಳೆದ ಬಾರಿಯ ಮತದಾನಕ್ಕೆ ಹೋಲಿಕೆ ಮಾಡಿದರೆ ಉಪ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿದೆ. ಸರ್ಕಾರ ರಜೆ ಘೋಷಣೆ ಮಾಡಿದೆ, ಆದರೂ ಜನರು ಮತದಾನ ಮಾಡಲು ಬರಲು ಸಾಧ್ಯವಾಗಿಲ್ಲ. ವಿರೋಧ ಪಕ್ಷದ ಅಪಪ್ರಚಾರಕ್ಕೆ ಉತ್ತರ ಕೊಡುತ್ತೇವೆ. ಜನ ನನ್ನ ಕೈ ಬಿಡಲ್ಲ. ಕಾಂಗ್ರೆಸ್ - ಜೆಡಿಎಸ್ ಒಳ ಒಪ್ಪಂದ ಆಗಿದೆ ಅನ್ನೋದು ಗೊತ್ತಾಗಿದೆ. ಲೋಕಸಭಾ ಚುನಾವಣೆ ಮೈತ್ರಿ ಏನಾಯ್ತು ಅದೇ ಈಗ ರಿಪೀಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮಶೇಖರ್ ಫುಲ್ ಪವರ್ ಫುಲ್ ಅಂತ ಗೊತ್ತಾಗಿದೆ. ರಾಜ್ಯ ನಾಯಕರು ಬಂದು ಪ್ರಚಾರ ಮಾಡಿದ್ದಾರೆ. ಆದರೆ, ನನ್ನ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ ಅಂದರೆ ನಾನು ಪವರ್ಫುಲ್ ಎಂಬುದು ಗೊತ್ತಾಗುತ್ತದೆ ಎಂದರು.
ಗ್ರೌಂಡ್ ರಿಪೋರ್ಟ್ ಚೆನ್ನಾಗಿದೆ. ಇವತ್ತೇ ನನಗೆ ರಿಸಲ್ಟ್ ಗೊತ್ತಾಗುತ್ತದೆ. ನಾನು ಏಜೆಂಟ್ಗಳಿಂದ ಮಾಹಿತಿ ಪಡೆಯುವೆ. ನೂರಾರು ಕಡೆ ನಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆಯುತ್ತೇನೆ. ನೂರಕ್ಕೆ ನೂರು ನನ್ನ ಗೆಲುವು ಪಕ್ಕಾ. ಅರವಿಂದ ಲಿಂಬಾವಳಿ, ವಿ.ಎಸ್.ಸೋಮಣ್ಣ, ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಎಸ್.ಎಂ.ಕೃಷ್ಣ ಎಲ್ಲರೂ ವರ್ಕ್ ಮಾಡಿದ್ದಾರೆ ಎಂದರು.