ಬೆಂಗಳೂರು:ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ನಡೆಯಿತು. ಇದರಲಲ್ಲಿ 12 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ.
ಹೇರೋಹಳ್ಳಿ ಪಾಲಿಕೆ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು. ನಿನ್ನೆಯವರೆಗೆ ಯಶವಂತಪುರ ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಪ್ರಮುಖರಾಗಿದ್ದಾರೆ.
ಇಂದು ಚುನಾವಣಾಧಿಕಾರಿ ನವೀನ್ ಜೋಸೆಫ್ ನೇತೃತ್ವದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು. ಮೂವರು ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗುವ ಜತೆಗೆ ಎಲ್ಲ ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ. ಆ ಮೂಲಕ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ 12 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ.
ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್, ಜೆಡಿಎಸ್ ಅಭ್ಯರ್ಥಿ ಟಿ ಎನ್ ಜವರಾಯಿಗೌಡ, ಕಾಂಗ್ರೆಸ್ ಅಭ್ಯರ್ಥಿ ಪಿ ನಾಗರಾಜ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಕೃಷ್ಣಯ್ಯ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ನಾಗರಾಜು ಸಿ ಆರ್, ಉತ್ತಮ ಪ್ರಜಾಕೀಯ ಪಕ್ಷದ ಮಂಜುನಾಥ್ ಎಂ, ಹಿಂದುಸ್ತಾನ್ ಜನತಾ ಪಕ್ಷದ ಶ್ರೀ ವೆಂಕಟೇಶ್ವರ ಮಹಾ ಸ್ವಾಮೀಜಿ, ಪಕ್ಷೇತರ ಅಭ್ಯರ್ಥಿಗಳಾದ ವೇಣುಗೋಪಾಲ್, ಬೀರೇಶ್, ಸರ್ವಮಂಗಳ, ಶಂಬುಲಿಂಗೇಗೌಡ, ಹನುಮಂತ ಎಂಬುವರ ನಾಮಪತ್ರಗಳು ಸಿಂಧುವಾಗಿದೆ.