ಬೆಂಗಳೂರು:ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ವಾಕ್ಸಮರ ಜೋರಾಗಿದೆ.
ಇಂದು ಎರಡೂ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮಾತನಾಡಿ, ಕುಮಾರಸ್ವಾಮಿಯೇ ಈ ಕ್ಷೇತ್ರಕ್ಕೆ ಬಂದರೂ ಏನೂ ಮಾಡೋಕಾಗಲ್ಲ. ಜೆಡಿಎಸ್ ಅಭ್ಯರ್ಥಿಗೆ ನಾಟಕ ಮಾಡೋದಕ್ಕೆ ಸ್ಟೇಜ್, ಬಣ್ಣ, ಏನೂ ಬೇಕಾಗಿಲ್ಲ ಎಂದು ಟಾಂಗ್ ನೀಡಿದರು.
ಯಶವಂಪುರದಲ್ಲಿ ತಾರಕಕ್ಕೇರಿದ ಬಿಜೆಪಿ,ಜೆಡಿಎಸ್ ಅಭ್ಯರ್ಥಿಗಳ ವಾಕ್ಸಮರ ಜೆಡಿಎಸ್ ಅಭ್ಯರ್ಥಿ ಅಫಿಡವಿಟ್ನಲ್ಲಿ 190 ಕೋಟಿ ರೂ. ತೋರಿಸುತ್ತಾರೆ. ಇಷ್ಟು ದುಡ್ಡಿದ್ದರೂ ಅವರಿಗೆ ಮನೆ ಕಟ್ಟೋಕಾಗಿಲ್ಲ. ಮಗನ ಮದುವೆ ಮಾಡೋಕಾಗಿಲ್ಲ ಎಂದು ಅಳ್ತಾರೆ. ಇಷ್ಟೆಲ್ಲ ಇದ್ಮೇಲೆ ಕಣ್ಣೀರು ಹಾಕೋದ್ಯಾಕೆ?. ನಾನೂ ಅನರ್ಹ ಆದ್ಮೇಲೆ ಎರಡು ತಿಂಗಳು ಕಷ್ಟದಲ್ಲಿದ್ದೆ. ಆದರೆ ಒಳಗೆ ನೋವಿದೆ ಎಂದು ನಾನೇನೂ ಕಣ್ಣೀರು ಸುರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಫಲಿತಾಂಶ ಬಂದ ಬಳಿಕ ಯಡಿಯೂರಪ್ಪ ಮನೆಗೋಗ್ತಾರೆ ಎಂಬ ಸಿದ್ದು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಸಿಎಂ ಆಗಿ ಮೂರುವರೆ ವರ್ಷ ಪೂರೈಸುತ್ತಾರೆ. ಬಹುಶಃ ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಕೈ ತಪ್ಪಬಹುದು. ಸಿದ್ದರಾಮಯ್ಯ ವಿಪಕ್ಷ ಸ್ಥಾನದಿಂದ ಮನೆಗೆ ಹೋಗುವ ಸ್ಥಿತಿ ಬರುತ್ತದೆ. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನವರು ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ. ಡಮ್ಮಿ ಕ್ಯಾಂಡಿಡೇಟ್ ಹಾಕಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಚಾರಕ್ಕೆ ಬರುವ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟನೆ ಕೊಡಲಿ ಎಂದು ಕಿಡಿಕಾರಿದರು.
ನಾನು ಅವನಂತೆ ಮಾರಾಟದ ವಸ್ತುವಲ್ಲ:
ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಎಸ್.ಟಿ.ಸೋಮಶೇಖರ್ಗೆ ತಿರುಗೇಟು ನೀಡಿದರು. ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಇದುವರೆಗಿನ ಎಲ್ಲ ಚುನಾವಣೆಗಳನ್ನು ನನ್ನ ಸ್ವಂತ ಹಣ ಖರ್ಚು ಮಾಡಿ ಎದುರಿಸಿದ್ದೇನೆ. ಇವನ ರೀತಿ ಬಿಲ್ಡರ್ಗಳಿಂದ ರಿಯಲ್ ಎಸ್ಟೇಟ್ನವರಿಂದ, ಅವರಿವರಿಂದ ಹಣ ವಸೂಲಿ ಮಾಡಿ ಚುನಾವಣೆ ನಡೆಸುವವನು ನಾನಲ್ಲ. ನಾನು ಅವನಂತೆ ಮಾರಾಟದ ವಸ್ತು ಅಲ್ಲ ಎಂದು ತಿರುಗೇಟು ನೀಡಿದರು.
ನಾನು ಗತಿ ಇಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕುತ್ತಿಲ್ಲ. ಅನಗತ್ಯವಾಗಿ ಕ್ಷೇತ್ರದಲ್ಲಿ ಚುನಾವಣೆ ಹೇರಿಕೆ ಮಾಡಿದ್ರಲ್ಲ ಅಂತ ಕಣ್ಣೀರು ಹಾಕುತ್ತಿದ್ದೇನೆ. ಶೋಭಾ ಕರಂದ್ಲಾಜೆಯವರೇ ಹೆದರಿ ಕ್ಷೇತ್ರ ಬಿಟ್ಟು ಓಡಿಹೋಗುವಂತೆ ಮಾಡಿದ್ದವನು ನಾನು. ಅಂತಹುದರಲ್ಲಿ ಈ ಸೋಮಶೇಖರ್ಗೆ ಹೆದರುತ್ತೇನಾ. ಬಿಜೆಪಿ ನಾಯಕರನ್ನೆಲ್ಲಾ ಬೈಯ್ದ ಇದೇ ಸೋಮಶೇಖರ್, ಈಗ ಅವರ ಜೊತೆಯೇ ಹೋಗಿ ಸೇರಿಕೊಂಡಿದ್ದಾನೆ. ಅವನಿಗೇನು ನೈತಿಕತೆ ಇದೆ. ಅವನ ಜಾಗದಲ್ಲಿ ನಾನೇನಾದರೂ ಇದ್ದಿದ್ದರೆ ನೇಣು ಹಾಕಿಕೊಳ್ಳುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.