ಬೆಂಗಳೂರು: ನಾಳೆಯಿಂದ ಸೆಪ್ಟೆಂಬರ್ 7 ರವರೆಗೆ ರಾಜ್ಯದಲ್ಲಿ ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ, ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಮುಂದಿನ 48 ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ನೀಡಲಾಗಿದೆ.
6 ದಿನ ಭಾರಿ ಮಳೆ: ರಾಜ್ಯದಲ್ಲಿ ನೈರುತ್ಯ ಮುಂಗಾರು ಸಕ್ರಿಯಗೊಂಡಿದೆ. ಹೀಗಾಗಿ ಮುಂದಿನ 6 ದಿನಗಳ ಕಾಲ ಜೋರು ಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚುಸಹಿತ ಗುಡುಗು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಹಿರಿಯೂರಿನಲ್ಲಿ ಅತಿ ಹೆಚ್ಚು ಮಳೆ: ರಾಜ್ಯದಲ್ಲಿ ನಿನ್ನೆಯಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 12 ಸೆಂ.ಮೀ ಮಳೆಯಾಗಿದೆ. ಹಿಡಕಲ್ ಅಣೆಕಟ್ಟು (ಬೆಳಗಾವಿ ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ನಲ್ಲಿ (ಬೆಂಗಳೂರು ನಗರ ಜಿಲ್ಲೆ) 11, ಬೆಂಗಳೂರು ನಗರ 9, ಮಧುಗಿರಿ ಬರಗೂರು (ಎರಡೂ ತುಮಕೂರು ಜಿಲ್ಲೆ), ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮತ್ತು ರಾಮನಗರದಲ್ಲಿ 7 ಸೆಂ.ಮೀ ಮಳೆ ಬಿದ್ದಿದೆ.