ಬೆಂಗಳೂರು :ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದ ಯಲಹಂಕ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ನಲ್ಲಿ ಮಳೆ ನೀರು ನುಗ್ಗಿ, ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.
ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ಗೆ ನುಗ್ಗಿದ ಮಳೆ ನೀರು.. ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತೇವಾಂಶ ಹೆಚ್ಚಳದಿಂದಾಗಿ ಅನೇಕ ಹಳೆಯ ಕಟ್ಟಡಗಳು ಶಿಥಿಲವಾಗುತ್ತಿವೆ. ಇದೇ ರೀತಿ ಮಳೆ ಮುಂದುವರಿದರೆ ಬೆಂಗಳೂರಿನಲ್ಲಿ ಹಳೆಯ ಕಟ್ಟಡಗಳು ಕುಸಿಯುವ ಆತಂಕ ಮನೆ ಮಾಡಿದೆ.
ಯಲಹಂಕದ ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ವಿಹಾರ ಇದೆ. ಇಲ್ಲಿ ಸುಮಾರು 8 ಬ್ಲಾಕ್ಗಳಿದ್ದು, ಒಟ್ಟು 603 ಫ್ಲಾಟ್ಗಳನ್ನು ಒಳಗೊಂಡಿರುವ ಅಪಾರ್ಟ್ಮೆಂಟ್ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ.
ಆದರೆ, ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ್ಟ್ಮೆಂಟ್ ಪಕ್ಕದಲ್ಲಿರುವ ಅಮ್ಮಾನಿ ಕೆರೆ ಭರ್ತಿಯಾಗಿ ಕೆರೆಯ ಕೋಡಿ ಒಡೆದು ಹೋಗಿದೆ. ಪರಿಣಾಮ ಅಪಾರ್ಟ್ಮೆಂಟ್ ಬೇಸ್ಮೆಂಟ್ ಸಂಪೂರ್ಣ ಜಲಾವೃತಗೊಂಡಿದೆ.
ಅಪಾರ್ಟ್ಮೆಂಟಿನ ಬೇಸ್ಮೆಂಟ್ನಲ್ಲಿ ಕೆರೆಯ ನೀರು ನಿಂತಿದ್ದು, ಬೀಚ್ನಂತಾಗಿದೆ. ಬೇಸ್ಮೆಂಟ್ನಲ್ಲಿನ ನೀರಿನಲ್ಲಿ ವಾಹನಗಳು ತೇಲಾಡುತ್ತಿವೆ. ಇಂಜಿನ್ ಸೀಜ್ ಆಗುವ ಭೀತಿಯಲ್ಲಿ ವಾಹನ ಮಾಲೀಕರಿದ್ದು, ಕಾರು, ಬೈಕ್ಗಳನ್ನು ಹೊರ ತರಲು ಯತ್ನಿಸುತ್ತಿದ್ದಾರೆ. ಆದರೆ, ಮಳೆ ಇದಕ್ಕೆ ಅಡ್ಡಿಯಾಗಿದೆ.
ಪರದಾಡುತ್ತಿರುವ ಅಪಾರ್ಟ್ಮೆಂಟ್ ನಿವಾಸಿಗಳು ಪವರ್ ಕಟ್ :ಮಳೆ ಅವಾಂತರದಿಂದ ಯಾವುದೇ ಅವಘಡ ಸಂಭವಿಸದಂತೆ ಅಪಾರ್ಟ್ಮೆಂಟಿನಲ್ಲಿ ವಿದ್ಯುತ್ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ನಿನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನೊಳಗೆ ಮಳೆ ನೀರು ನುಗ್ಗಿದೆ. ಸುಮಾರು 300 ಎಕರೆ ವಿಸ್ತೀರ್ಣವಿರುವ ಅಮ್ಮಾನಿ ಕೆರೆ ಕಟ್ಟೆ ಒಡೆದು ಅವಾಂತರ ಸೃಷ್ಟಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸೇತುವೆ ದಾಟುವಾಗ ಕೊಚ್ಚಿ ಹೋದ ಬೈಕ್: ಕೂದಲೆಳೆ ಅಂತರದಲ್ಲಿ ಸವಾರರು ಪಾರು- ವಿಡಿಯೋ