ಬೆಂಗಳೂರು:ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದರೂ ಸಂಪುಟ ವಿಸ್ತರಣೆ ಸರ್ಕಸ್ಗೆ ತೆರೆ ಬಿದ್ದಿಲ್ಲ. ಯಾವಾಗ ಹೈಕಮಾಂಡ್ನಿಂದ ಅನುಮತಿ ಸಿಗುತ್ತೆ ಎನ್ನುವುದು ಇನ್ನೂ ಸಸ್ಪೆನ್ಸ್ನಲ್ಲೇ ಉಳಿದಿದ್ದು ಭಾನುವಾರ ಸಂಜೆ, ಸೋಮವಾರ ಬೆಳಗ್ಗೆ ಸಂಪುಟ ವಿಸ್ತರಣೆ ಆಗಬಹುದು ಎನ್ನುವ ಮಾತುಗಳು ಮಾತ್ರ ಕೇಸರಿ ಪಾಳಯದಲ್ಲಿ ಹರಿದಾಡುತ್ತಿವೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನವದೆಹಲಿಯಿಂದ ಸಿಹಿ ಸುದ್ದಿ ತರಲಿದ್ದಾರೆ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರೀಕ್ಷೆ ಕಡೆಗೂ ಹುಸಿಯಾಗಿದೆ. ಹೈಕಮಾಂಡ್ನಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಯಾವುದೇ ಸಂದೇಶವನ್ನು ಅರುಣ್ ಸಿಂಗ್ ತಂದಿಲ್ಲ. ಸಂಘಟನಾತ್ಮಕ ಜವಾಬ್ದಾರಿ ನಿರ್ವಹಣೆಯ ಭಾಗವಾಗಿ ರಾಜ್ಯಕ್ಕೆ ಮೊದಲ ಭೇಟಿ ನೀಡಿದ್ದಾರೆ. ಇದರಿಂದಾಗಿ ಸಚಿವಾಕಾಂಕ್ಷಿಗಳು ಹಾಗು ಯಡಿಯೂರಪ್ಪ ತೀವ್ರ ನಿರಾಸೆಗೊಳಗಾಗಿದ್ದಾರೆ.
ಅರುಣ್ ಸಿಂಗ್ ಜೊತೆ ಸ್ವತಃ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪ ಮಾಡಿದ್ದು, ಇದಕ್ಕೆ ಹೈಕಮಾಂಡ್ ಕಡೆಗೆ ರಾಜ್ಯ ಉಸ್ತುವಾರಿ ಬೆರಳು ತೋರಿಸಿದ್ದಾರೆ. ಇದರಿಂದಾಗಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಸಿಎಂ ಬಿಎಸ್ವೈ ಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಆದರೂ ಪಟ್ಟು ಬಿಡದ ಸಿಎಂ ಬಿಎಸ್ವೈ, ಮತ್ತೊಮ್ಮೆ ಹೈಕಮಾಂಡ್ ಸಂಪರ್ಕ ಮಾಡುವ ಪ್ರಯತ್ನ ನಡೆಸಿದ್ದು, ಕನಿಷ್ಟ ಸರ್ಕಾರ ರಚನೆಗೆ ಕಾರಣರಾದ ಮೂವರಿಗಾದರೂ ಸಚಿವ ಸ್ಥಾನ ನೀಡಲು ಅವಕಾಶ ಕೊಡಿ ಅಥವಾ ಇನ್ನಿಬ್ಬರ ಹೆಸರು ನೀವೇ ಸೂಚಿಸಿ 3+2 ಸೂತ್ರದಂತೆ ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಲು ನಿರ್ಧರಿಸಿದ್ದಾರೆ.
ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ಅಪೇಕ್ಷೆಯನ್ನು ಸಿಎಂ ಹೊಂದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಇದಕ್ಕೆ ಹೈಕಮಾಂಡ್ ಸಮ್ಮತಿಸುವುದು ಅನುಮಾನ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆ ಮಾಡುವ ಕುರಿತು ಯಡಿಯೂರಪ್ಪ ವೇಗಕ್ಕೆ ಹೈಕಮಾಂಡ್ ನಾಯಕರು ಸ್ಪಂದಿಸುತ್ತಿಲ್ಲ, ಅಧಿವೇಶನ ಮುಗಿದ ನಂತರ ನೋಡೋಣ ಎನ್ನುವ ನಿಲುವನ್ನು ವರಿಷ್ಠರು ಹೊಂದಿದ್ದಾರೆ ಎನ್ನುವ ಮಾತುಗಳೂ ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿವೆ.