ಬೆಂಗಳೂರು:ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದ ಸರ್ಕಾರಿ ನಿವಾಸ ಕಾವೇರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಖಾಲಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಕಾರಣದಿಂದ ಸರ್ಕಾರಿ ನಿವಾಸವನ್ನು ತೆರವು ಮಾಡಿ ಖಾಸಗಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಈ ಹಿಂದೆ ಕಾವೇರಿಗಾಗಿ ಸಿದ್ದರಾಮಯ್ಯ ಅವರಿಂದ ಆರು ತಿಂಗಳು ಕಾದಿದ್ದ ಯಡಿಯೂರಪ್ಪ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಡಮಾಡದೇ ನಿವಾಸ ತೆರವು ಮಾಡಿಕೊಟ್ಟಿದ್ದಾರೆ.
ಕುಮಾರಪಾರ್ಕ್ ರಸ್ತೆಯಲ್ಲಿದ್ದ ಸರ್ಕಾರಿ ನಿವಾಸ ಕಾವೇರಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಖಾಲಿ ಮಾಡಿದ್ದು, ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಗೆ ಶಿಫ್ಟ್ ಆಗಿದ್ದಾರೆ. 2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು.
ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿ ಹುದ್ದೆಯಿಂದ ಕೆಳಗಿಳಿದರೂ ಸಹ ಕಾವೇರಿಯನ್ನೇ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡಿದ್ದರು. 2021ರ ಜುಲೈನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಯಡಿಯೂರಪ್ಪ ಕಾವೇರಿ ನಿವಾಸದಲ್ಲೇ ಮುಂದುವರೆದಿದ್ದರು. ನಿಕಟಪೂರ್ವ ಮುಖ್ಯಮಂತ್ರಿ ಎನ್ನುವ ಕಾರಣದಿಂದಾಗಿ ಕಾವೇರಿಯಲ್ಲೇ ಮತ್ತೆ ಎರಡು ವರ್ಷ ವಾಸ್ತವ್ಯ ಹೂಡಿದ್ದರು. ಕಳೆದ ನಾಲ್ಕು ವರ್ಷ ಕಾವೇರಿ ನಿವಾಸ ಬಿಜೆಪಿ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು. ಇದೀಗ ಆ ನಿವಾಸವನ್ನು ಯಡಿಯೂರಪ್ಪ ಖಾಲಿ ಮಾಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಯಡಿಯೂರಪ್ಪ ಶಿಫ್ಟ್ ಆಗಿದ್ದಾರೆ. ಹಾಗಾಗಿ ಇನ್ಮುಂದೆ ರಾಜ್ಯ ಬಿಜೆಪಿಯ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಧವಳಗಿರಿ ಮಾರ್ಪಾಡಾಗಲಿದೆ. ಬಿಜೆಪಿ ನಾಯಕರು ಇನ್ಮುಂದೆ ಧವಳಗಿರಿ ನಿವಾಸಕ್ಕೆ ಭೇಟಿ ನೀಡಲಿದ್ದು, ಪ್ರಮುಖ ಸಭೆಗಳು ಧವಳಗಿರಿಯಲ್ಲೇ ನಡೆಯಲಿವೆ.
ಮರಳಿ ಸಿದ್ದು ವಶಕ್ಕೆ ಕಾವೇರಿ:2013ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಇದ್ದರು. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಾರದಿದ್ದರೂ 2018ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಮುಂದುವರೆಸಿದ್ದರು. ಆ ನಿವಾಸ ಕೆಜೆ ಜಾರ್ಜ್ಗೆ ಮಂಜೂರಾದರೂ ಸಿದ್ದರಾಮಯ್ಯ ನಿವಾಸ ಖಾಲಿ ಮಾಡದೆ ಅಲ್ಲೇ ಇದ್ದರು.
ಆದರೆ, 2019ರಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಕಾವೇರಿ ನಿವಾಸ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪಗೆ ಮಂಜೂರಾಯಿತು. ಆದರೂ ಸಹ ನಿವಾಸ ತೆರವಿಗೆ ಸಿದ್ದರಾಮಯ್ಯ ನಿರಾಕರಿಸಿದ್ದರು. ಸಿದ್ದರಾಮಯ್ಯ ನಾಮಫಲಕ ತೆರವು, ನೀರು ನಿಲ್ಲಿಸುವ ಎಚ್ಚರಿಕೆ ವಿವಾದದಂತಹ ಚಟುವಟಿಕೆ ನಡೆದು ಕೊನೆಗೆ ಯಡಿಯೂರಪ್ಪ ಸ್ವತಃ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಎಷ್ಟು ದಿನ ಬೇಕಾದರೂ ಕಾವೇರಿ ನಿವಾಸದಲ್ಲೇ ಇರಲಿ, ಅವರು ಖಾಲಿ ಮಾಡಿದ ನಂತರವೇ ನಾನು ಅಲ್ಲಿಗೆ ಹೋಗುತ್ತೇನೆ. ಒತ್ತಡ ಹಾಕಿ ಖಾಲಿ ಮಾಡಿಸಬಾರದು ಎಂದು ಸೂಚಿಸಿದ್ದರು. ಬಳಿಕ ಆರು ತಿಂಗಳ ನಂತರ ಕಾವೇರಿ ಖಾಲಿ ಮಾಡಿದ ಸಿದ್ದರಾಮಯ್ಯ, ಅಳೆದು ತೂಗಿ ತಮಗೆ ಹಂಚಿಕೆಯಾಗಿದ್ದ ಕುಮಾರಪಾರ್ಕ್ ಈಸ್ಟ್ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು.
ಇದನ್ನೂ ಓದಿ:ಗ್ಯಾರಂಟಿ ವಿಚಾರದಲ್ಲಿ ಮಾತು ತಪ್ಪಿದರೆ, ಕಾಂಗ್ರೆಸ್ ವಿರುದ್ಧ ವಚನಭ್ರಷ್ಟ ಪೋಸ್ಟರ್ ರಿಲೀಸ್: ಎನ್.ರವಿಕುಮಾರ್