ಕರ್ನಾಟಕ

karnataka

By

Published : Apr 25, 2023, 4:12 PM IST

Updated : Apr 25, 2023, 8:16 PM IST

ETV Bharat / state

ಮೋದಿ, ಅಮಿತ್ ಶಾ ಗಿಂತ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ದೊಡ್ಡ ನಾಯಕರು: ಬಿ ಕೆ ಹರಿಪ್ರಸಾದ್

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ಪಕ್ಷದ ಪ್ರಚಾರ ಹಾಗೂ ಸಿದ್ಧತೆ ಬಗ್ಗೆ ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್​ ಅವರು ಈಟಿವಿ ಭಾರತಕ್ಕೆ ಎಕ್ಸ್​ಕ್ಲೂಸಿವ್​ ಸಂದರ್ಶನ ನೀಡಿದ್ದಾರೆ.

ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್
ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್

ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗಿಂತ ಕರ್ನಾಟಕ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಬಹುದೊಡ್ಡ ನಾಯಕರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ತಿಳಿಸಿದ್ದಾರೆ. ವಿದಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಮತ್ತು ಸಿದ್ಧತೆ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ಕರ್ನಾಟಕದ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಇರುವಷ್ಟು ಪಾಪ್ಯುಲ್ಯಾರಿಟಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗಿಲ್ಲ ಎಂದು ಹೇಳಿದ್ದು, ಸಂದರ್ಶನದ ಸಾರಾಂಶ ಇಲ್ಲಿದೆ.

ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್

ಪ್ರಶ್ನೆ - ಕಾಂಗ್ರೆಸ್ ಪಕ್ಷದ ಪ್ರಚಾರ ಹೇಗಿದೆ..?

ಉ-ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಚಾರ ಈಗಲ್ಲ. ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಕೋವಿಡ್ ಸಂದರ್ಭದಲ್ಲಿ ಜನಸೇವೆ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಸೇರಿದಂತೆ ಹಲವಾರು ಹೋರಾಟದ ರೂಪದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಚುನಾವಣೆ ಹತ್ತಿರವಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ತಮ್ಮ ನೇತೃತ್ವದ 3 ತಂಡಗಳಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಲಾಗಿದೆ.

ಪ್ರಶ್ನೆ - ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಮತದಾರರಲ್ಲಿ ಅನುಮಾನಗಳಿವೆಯೇ?

ಉ - ಪ್ರತಿ ಮನೆಗೆ 200 ಯುನಿಟ್ ತನಕ ಉಚಿತ ವಿದ್ಯುತ್ ನೀಡುವ, ಮನೆಯ ಯಜಮಾನಿಗೆ ಪ್ರತಿತಿಂಗಳು 2000 ರೂ ಮಾಸಿಕ ಪ್ರೋತ್ಸಾಹ ನೀಡುವ, ಪದವೀಧರರಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಹಾಗೂ ಕಡುಬಡವರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಈ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೇ ತರುತ್ತೇವೆ. ಈ ಯೋಜನೆಗಳ ಅನುಷ್ಠಾನಕ್ಕೆ 60 ಸಾವಿರ ಕೋಟಿ ರೂ ಬಜೆಟ್ ಸಾಕು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಆಹಾರ ಸಂರಕ್ಷಣೆ ಕಾನೂನು ಜಾರಿಗೆ ತಂದು ದೇಶದಲ್ಲಿಯೇ ಬಡವರಿಗೆ ಆಹಾರಧಾನ್ಯ ಮತ್ತು ನರೇಗಾ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ್ದು ಕಾಂಗ್ರೆಸ್ ಪಕ್ಷದ ಹಿರಿಮೆಯಾಗಿದೆ.

ಪ್ರಶ್ನೆ - ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಟ್ರಂಪ್ ಕಾರ್ಟ್ ಆಗಲಿದೆಯಾ?

ಉ - ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ಈಗಾಗಲೇ ಘೋಷಣೆ ಮಾಡಿರುವ ನಾಲ್ಕು ಪ್ರಮುಖ ಘೋಷಣೆಗಳು ಚುನಾವಣೆ ಟ್ರಂಪ್ ಕಾರ್ಡ್ ಆಗಲಿವೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಈಡೇರಿಸುತ್ತದೆ. ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಅವರಂತೆ ಜನತೆಗೆ ರಸ್ತೆ, ನೀರು, ಆಹಾರ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳುವುದಿಲ್ಲ ಎಂದು ಕಟೀಲ್ ಹೇಳಿಕೆಗೆ ಕಟುಕಿದರು.

ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್

ಪ್ರಶ್ನೆ - ಟಿಕೆಟ್ ಹಂಚಿಕೆ ನಂತರ ಕಾಂಗ್ರೆಸ್​ನಲ್ಲಿ ಬಂಡಾಯದ ಚಟುವಟಿಕೆಗಳು ಹೆಚ್ಚಾಗಿವೆ..

ಉ-ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ವೈಜ್ಞಾನಿಕವಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಹತ್ತರಿಂದ ಹದಿನೈದು ಕ್ಷೇತ್ರಗಳಲ್ಲಿ ಸ್ವಲ್ಪ ಅಸಮಾಧಾನವಿದೆ. ಅದನ್ನ ಬಗೆಹರಿಸಲಾಗುತ್ತದೆ. ಮೊದಲೆರಡು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದಾಗ ಹೆಚ್ಚಿನ ಬಂಡಾಯ ವ್ಯಕ್ತವಾಗಿಲ್ಲ. ಮೂರು ಮತ್ತು ನಾಲ್ಕನೇ ಪಟ್ಟಿ ಪ್ರಕಟಿಸಿದಾಗ ಸ್ವಲ್ಪ ಅಸಮಾಧಾನ ಟಿಕೆಟ್ ಆಕಾಂಕ್ಷಿತರಿಂದ ವ್ಯಕ್ತವಾಗಿದೆ. ಬಿಜೆಪಿ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್​ನಲ್ಲಿ ಬಂಡಾಯ ಕಡಿಮೆ, ಬಿಜೆಪಿ ಮತ್ತು ಜೆಡಿಎಸ್​ನಿಂದ 47 ಜನ ಟಿಕೆಟ್ ಆಕಾಂಕ್ಷಿತರು ಕಾಂಗ್ರೆಸ್ ಕಡೆ ಬಂದಿದ್ದಾರೆ.

ಪ್ರಶ್ನೆ - ವರುಣ ಜೊತೆಗೆ ಕೋಲಾರದಲ್ಲಿಯೂ ಸ್ಪರ್ಧಿಸಲು ಅಪೇಕ್ಷಿಸಿದ್ದ ಸಿದ್ದರಾಮಯ್ಯನವರನ್ನು ಮೂಲ ಕಾಂಗ್ರೆಸ್ಸಿಗರೆಲ್ಲಾ ಸೇರಿ ನಿರಾಸೆಗೊಳಿಸಿದಿರಿ..?

ಉ - ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕು. ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ ಎನ್ನುವುದು ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಸರ್ವಾನುಮತದಿಂದ ತೆಗೆದುಕೊಂಡ ತೀರ್ಮಾನವಾಗಿದೆ. ಈ ನಿರ್ಧಾರಕ್ಕೆ ಸಿದ್ದರಾಮಯ್ಯ ಅವರು ಸಹ ಭಾಗಿಯಾಗಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಒಟ್ಟಾಗಿ ಕೋಲಾರ ಟಿಕೆಟ್ ತಪ್ಪಿಸಿದರು ಎನ್ನುವ ಆರೋಪ ಸರಿಯಲ್ಲ.

ಪ್ರಶ್ನೆ - ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿಯಷ್ಟು ತಂತ್ರಗಾರಿಕೆಗಳು ಮತ್ತು ಪ್ರಯೋಗಗಳನ್ನ ಕಾಂಗ್ರೆಸ್ ಮಾಡಲಿಲ್ಲವೇಕೆ..?

ಉ - ವಿಶೇಷವಾದ ತಂತ್ರಗಾರಿಕೆ ಮಾಡುವಂತಹ ನಾಯಕರಾರು ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ನಾಯಕರ ಕೊರತೆಯಿದೆ.

ಪ್ರಶ್ನೆ - ಪ್ರಧಾನಿ ಮೋದಿ, ಅಮಿತ್ ಶಾ ಸರಣಿ ಪ್ರಚಾರ ಹೇಗೆ ಎದುರಿಸುತ್ತೀರಿ ?

ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್

ಉ -ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇರುವಷ್ಟು ಹೆಚ್ಚಿನ ಹೆಸರಿಲ್ಲ. ಇವರಿಬ್ಬರಿಗಿಂತಲೂ ರಾಜ್ಯದಲ್ಲಿ ಯಡಿಯೂರಪ್ಪನವರೇ ದೊಡ್ಡ ನಾಯಕರಾಗಿದ್ದಾರೆ. ಅದೇ ಕಾರಣಕ್ಕೆ ಸಂಸದೀಯ ಮಂಡಳಿ ಸದಸ್ಯರಾಗಿದ್ದರೂ ಯಡಿಯೂರಪ್ಪ ಅವರಿಗೆ ರಾಜ್ಯಾ ದ್ಯಂತ ಸುತ್ತಾಡಿ ಪ್ರಚಾರ ನಡೆಸುವಂತೆ ಬಿಜೆಪಿ ಹೈಕಮಾಂಡ್ ದುಂಬಾಲು ಬಿದ್ದಿದೆ.

ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ಮತ್ತು ಕೆಂದ್ರ ಸಚಿವ ಅಮಿತ್ ಶಾ ಅವರ ಸರಣಿ ಚುನಾವಣೆ ಪ್ರಚಾರಕ್ಕೆ ಹೆದರುವುದಿಲ್ಲ. ನಮ್ಮಲ್ಲಿನ ರಾಜ್ಯ ಮಟ್ಟದ ನಾಯಕರುಗಳೇ ಪ್ರಧಾನಿ ಮೋದಿ ಮತ್ತು ಶಾ ಜೋಡಿಯ ಚುನಾವಣೆ ರ‍್ಯಾಲಿಗಳ ಅಬ್ಬರವನ್ನು ಸಮರ್ಥವಾಗಿ ಎದುರಿಸಲಿದ್ದಾರೆ.

ಪ್ರಶ್ನೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಕಣಕ್ಕಿಳಿಸಿದ್ದರೆ ಪ್ರಬಲ ಪೈಪೋಟಿ ಏರ್ಪಡಿಸಿತ್ತಲ್ಲವೇ..?

ಉ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುತ್ತಿತ್ತು. ಹಾಗಾಗಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಬಿಜೆಪಿಯವರು ಯಾರಿಗಾದರೂ ಒಬ್ಬ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದಾರಾ.? ಈ ಹಿಂದೆ ಅಲ್ಪ ಸಂಖ್ಯಾತರಿಗೆ ಕೊಡುತ್ತಿದ್ದರು ಮತ್ತು ಆ ಸಮುದಾಯದ ಟೋಪಿಯನ್ನೂ ಹಾಕುತ್ತಿದ್ದರು.

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತಿಭ್ರಮಣೆ, ಕೊತ್ವಾಲನ ಜಪ ಮಾಡ್ತಿದ್ದಾರೆ: ಬಿ.ಕೆ.ಹರಿಪ್ರಸಾದ್

Last Updated : Apr 25, 2023, 8:16 PM IST

ABOUT THE AUTHOR

...view details