ಬೆಂಗಳೂರು: ನನ್ನ ಬಗ್ಗೆ ಇದ್ದ ತಪ್ಪು ತಿಳುವಳಿಕೆ ಸರಿಯಾಗಿದೆ. ಕೊಳೆ ಎಲ್ಲಾ ಹೋಗಿ ಯತ್ನಾಳ್ ಒಬ್ಬ ಅಪ್ಪಟ ಚಿನ್ನ ಅನ್ನೋದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಎಲ್ಲರಿಗೂ ತಿಳಿದಿದೆ. ಹಾಗಾಗಿ ಹಿರಿಯರ ಸಲಹೆಯಂತೆ ಇನ್ಮುಂದೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಮಾತನಾಡಲ್ಲ, ನನ್ನ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್, ಜೆಡಿಎಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ನಾಯಕರಲ್ಲ ಎಂದು ಈ ಹಿಂದೆ ಅರುಣ್ ಸಿಂಗ್ ಹೇಳಿಕೆ ನೀಡಿದ್ದರು ಎನ್ನವುದು ನಿಜ, ರಾಜಕೀಯವಾಗಿ ತಪ್ಪು ಕಲ್ಪನೆ ಆಗಿರುತ್ತದೆ. ಯಾರೋ ಏನೋ ಹೇಳಿರುತ್ತಾರೆ. ಯತ್ನಾಳ್ ಏನು ಇಲ್ಲ, ಹಾಗೆ ಹೀಗೆ ಎಂದು ಹೇಳಿರುತ್ತಾರೆ. ಆದರೆ ಯತ್ನಾಳ್ ಏನು ಎಂದು ಈಗ ಅವರಿಗೆ ಗೊತ್ತಾಗಿದೆ. ಈ ಸತ್ಯವನ್ನು ಒಪ್ಪಿಕೊಂಡು ನಮ್ಮನ್ನ ಪ್ರೀತಿಯಿಂದ ಆಲಿಂಗನ ಮಾಡಿ ಪ್ರೀತಿ ತೋರಿಸಿದ್ದಾರೆ ಎಂದರು.
ಹಿಂದೂ ಧರ್ಮದಲ್ಲಿ ಕ್ಷಮೆಗಿಂತ ದೊಡ್ಡದು ಯಾವುದೂ ಇಲ್ಲ. ಅರುಣ್ ಸಿಂಗ್ ನಮ್ಮ ಬಳಿ ಬಂದಿದ್ದಾರೆಂದು ದುರಹಂಕಾರದಿಂದ ಮಾತನಾಡುವುದಿಲ್ಲ. ಅರುಣ್ ಸಿಂಗ್ ಬಹಳ ದೊಡ್ಡತನ ತೋರಿಸಿದ್ದಾರೆ. ಅದರ ಅರ್ಥ ನಾನು ಚಿಕ್ಕವನಾದೆ ಅವರು ದೊಡ್ಡವರಾದರು ಎಂದು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವವರು ಜಿಲ್ಲಾಧ್ಯಕ್ಷರಿಗೆ ಹೇಳಿ ನನ್ನ ಬಳಿ ಬಂದಿದ್ದಾರೆ. ಹಾಗಾಗಿ ಅವರು ದೊಡ್ಡವರಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ನಾನೀಗ ಸ್ವಚ್ಛವಾಗಿದ್ದೇನೆ, ನಾನು ಹಿಂದೆಯೂ ಕಾರ್ಯಕರ್ತ, ಈಗಲೂ ಕಾರ್ಯಕರ್ತ, ಎಂದಿಗೂ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ಕೋರ್ ಕಮಿಟಿ ಸದಸ್ಯ ಆಗಬೇಕು ಅಂತ ನಾನು ಅರ್ಜಿ ಹಾಕಿಲ್ಲ. ಇವೆಲ್ಲಾ ರಾಜಕಾರಣದಲ್ಲಿ ಇದ್ದದ್ದೇ. ತಪ್ಪು ಕಲ್ಪನೆ ತಿಳಿ ಮಾಡಿಕೊಂಡು ಮುಂದೆ ನಡೆಯಬೇಕಿದೆ. ಪಂಚಮಸಾಲಿ ಹೋರಾಟ ವಿಚಾರವನ್ನೂ ತಿಳಿಸಿದ್ದೇನೆ. ನಾನಂತು ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಹೇಳಿದ್ದೇನೆ. ಪಾಪ ಅವರು ಶೇ.2 ಮಾತ್ರ ಇದ್ದಾರೆ. ಬ್ರಾಹ್ಮಣರನ್ನು ಅಲ್ಪಸಂಖ್ಯಾತರಿಗೆ ಸೇರಿಸಿದರೆ ವಿರೋಧ ಆಗಲ್ಲ. ಜೈನ, ಬೌದ್ಧ ಎಲ್ಲರೂ ಹಿಂದೂಗಳೇ. ಅವರು ಈಗ ಅಲ್ಪಸಂಖ್ಯಾತರಾಗಿಲ್ವಾ.? ಹಿಂದೂ ಧರ್ಮದ ರಕ್ಷಣೆಗೆ ಹುಟ್ಟಿದ್ದೇ ಸಿಖ್ ಧರ್ಮ. ಜೈನ, ಬೌದ್ಧ ಧರ್ಮ ಕೂಡ ಹಿಂದೂ ಧರ್ಮದ್ದೇ ಎಂದು ಯತ್ನಾಳ್ ಹೇಳಿದರು.
ಯಾರನ್ನೂ ಬೈಯದಂತೆ ಹಿರಿಯರು ಸೂಚಿಸಿದ್ದಾರೆ:ಯಾರ ವಿರುದ್ಧವೂ ಮಾತಾಡದಂತೆ ಹೇಳಿದ್ದಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಹೌದು ಹಿರಿಯರು ಸೂಚನೆ ನೀಡಿದ್ದಾರೆ. ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚಿಸಿದ್ದಾರೆ. ಇದಕ್ಕೆ ನಾನು ಒಪ್ಪಿದ್ದೇನೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಒಪ್ಪಿದ್ದೇನೆ. ನಾನು ಬಿಜೆಪಿ ನಾಯಕರು ವಿರುದ್ಧ ಮಾತನಾಡುವುದಿಲ್ಲ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಮಾತನಾಡುತ್ತೇನೆ ಎಂದರು. ಯಡಿಯೂರಪ್ಪ ವಿರುದ್ಧವೂ ಮಾತನಾಡಲ್ಲ, ಯಡಿಯೂರಪ್ಪ ಅವರನ್ನ ಯಾಕೆ ಬೈಯ್ಯಲಿ. ಅವರು ರಾಜಕೀಯದಿಂದ ದೂರಾಗಿದ್ದಾರೆ. ಅವರೇನು ಮುಂದೆ ಮುಖ್ಯಮಂತ್ರಿ ಆಗಲ್ವಲ್ಲ. ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಸಾಫ್ಟ್ ಕಾರ್ನರ್ ತೋರಿಸಿದರು.