ಬೆಂಗಳೂರು:ರೌಡಿ ಶೀಟರ್ ಜಗಳಕ್ಕೆ ಅಮಾಯಕರ ಕಾರುಗಳನ್ನು ಜಖಂಗೊಳಿಸಿದ್ದ ಆರು ಮಂದಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕಾರು ಜಖಂಗೊಳಿಸಿದ ಆರೋಪಿಗಳನ್ನು ಬಂಧಿಸಿದ ಯಲಹಂಕ ಪೊಲೀಸರು. ಯಲಹಂಕ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನ ಹಾಳುಗೆಡವಿದ್ದ ಕ್ಯಾಟ್ ಮಂಜ, ಶೀಲೀಲ್, ದರ್ಶನ್, ಪ್ರೇಮ್ ಕುಮಾರ್, ಚೇತನ್ ಹಾಗೂ ಸುನೀಲ್ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಸಂಪಿಗೆ ಹಳ್ಳಿ ಬಳಿಯ ಅಗ್ರಹಾರ ಲೇಔಟ್ ನಿವಾಸಿಗಳು. ಹಳೆ ದ್ವೇಷ ಹಿನ್ನೆಲೆಯಲ್ಲಿ ರೌಡಿಶೀಟರ್ಗಳಾದ ವಿಜಯ್, ಯೋಗೇಶ್ ಹಾಗೂ ನವೀನ್ ಮೇಲೆ ಕ್ಯಾಟ್ ಮಂಜ ಮತ್ತು ಗ್ಯಾಂಗ್ ಕಳೆದ ಭಾನುವಾರ ರಾತ್ರಿ ದಾಳಿ ನಡೆಸಿತ್ತು.
ಘಟನೆಗೂ ಎರಡು ದಿನ ಮೊದಲು ಇವರಿಬ್ಬರೂ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಎದುರಾಳಿ ವಿಜಯ್ಗೆ ಅವನ ಏರಿಯಾದಲ್ಲೆ ಹೊಡೆಯಬೇಕು ಎಂದು ಕ್ಯಾಟ್ ಮಂಜನ ಗ್ಯಾಂಗ್ ಸಂಚು ರೂಪಿಸಿತ್ತು. ಪೂರ್ವಸಂಚಿನಂತೆ ಭಾನುವಾರ ರಾತ್ರಿ ಏರಿಯಾಗೆ ನುಗ್ಗಿ ಮಾರಕಾಸ್ತ್ರ ಬೀಸಿ ಪುಂಡಾಟ ನಡೆಸಿದ್ದರು.
ಎದುರಾಳಿ ವಿಜಯ್ ಮೇಲೆ ಹಲ್ಲೆ ಮಾಡಿ ಇಲ್ಲಿ ನಮ್ಮದೆ ಹವಾ ಎಂದು ಕಾಲ್ಕಿತ್ತಿದ್ದರು. ಇದಕ್ಕೂ ಮುನ್ನ ಪಾರ್ಕಿಂಗ್ ಮಾಡಲಾಗಿದ್ದ ಕಾರುಗಳನ್ನು ಜಖಂಗೊಳಿಸಿದ್ದರು. ಸದ್ಯ ಯಲಹಂಕ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.