ಬೆಂಗಳೂರು:ನಮ್ಮ ಮೆಟ್ರೋ ಎರಡನೇ ಹಂತದ ಮೊದಲ ವಿಸ್ತಾರಿತ ಮಾರ್ಗವಾದ ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೋ ಸಂಚಾರಕ್ಕೆ ಸಿಎಂ ಬಿಎಸ್ವೈ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಇದೇ ತಿಂಗಳು 15ರಿಂದ ರೀಚ್-4 ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ.
ಸಂಕ್ರಾಂತಿ ಹಬ್ಬದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ಸಿಂಗ್ ಪುರಿ ಇಂದು ಸಂಜೆ 4.30ಕ್ಕೆ ಕೋಣನಕುಂಟೆ ಕ್ರಾಸ್ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ನಮ್ಮ ಮೆಟ್ರೋ ಎರಡನೇ ಹಂತದ ಮೊದಲ ವಿಸ್ತಾರಿತ ಮಾರ್ಗವಾದ ಯಲಚೇನಹಳ್ಳಿ-ಅಂಜನಾಪುರ ನಡುವೆ 6.29 ಕಿ.ಮೀ. ಮಾರ್ಗ ಇದಾಗಿದೆ. ಇದು ಹಸಿರು ಮಾರ್ಗದ ವಿಸ್ತಾರಣಾ ಮಾರ್ಗವಾಗಿದ್ದು, ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಯಲಚೇನಹಳ್ಳಿ-ಅಂಜನಾಪುರ ನಡುವೆ ಕೋಣನಕುಂಟೆ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ಶಿಪ್ ಎಂಬ ಐದು ಎಲಿವೇಟೆಟ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ 75 ಸಾವಿರ ಮಂದಿ ಓಡಾಟ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ನಿರೀಕ್ಷಿಸಿದೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ