ಬೆಂಗಳೂರು:ಲೋಕಸಭಾ ಚುನಾವಣಾ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಯಜ್ಞ ಯಾಗಾದಿಗಳ ಮೊರೆ ಹೋಗಿದ್ದಾರೆ. ಲೋಕ ಸಮರದಲ್ಲಿ ಉತ್ತಮ ಫಲಿತಾಂಶ ಬರಲಿ ಎನ್ನುವುದಕ್ಕಾಗಿ ಬಿಜೆಪಿ ನಾಯಕರು ಯಜ್ಞ ಮಾಡಿಸಿದರು. ಆ ಮೂಲಕ ರಾಜ್ಯ-ರಾಷ್ಟ್ರದಲ್ಲಿ ಕಮಲ ಅರಳಿಸಲು ದೈವ ಪ್ರೇರಣೆಗೆ ಮುಂದಾದರು.
ಲೋಕಸಭೆ ಮತ್ತು ರಾಜ್ಯದಲ್ಲಿನ ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಹಿಂದಿರುಗಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದರು. ಗಣ ಹೋಮ, ರುದ್ರ ಹೋಮ, ಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಹೋಮಗಳನ್ನು ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪೂರ್ಣಹುತಿ ಸಲ್ಲಿಕೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಜ್ಞದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ ಪೂರ್ಣಾಹುತಿ ನೀಡಿವ ಕಾರ್ಯ ಮುಗಿಸಿದರು.
ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದ ಬಿಜೆಪಿ ನಾಯಕರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ರಾಜ್ಯದಲ್ಲಿ ಕಾಡುತ್ತಿರುವ ಭೀಕರ ಬರಗಾಲ ಶಮನಗೊಳ್ಳಬೇಕು. ಮಳೆ ಬೆಳೆ ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಯಜ್ಞ ಯಾಗಾದಿ ಹಾಗೂ ಹೋಮಗಳನ್ನು ನಡೆಸಿದ್ದೇವೆ. ಅಲ್ಲದೆ ಮಳೆ, ಬೆಳೆಯಾಗಿ ಸಮೃದ್ಧಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿಯೂ ತಿಳಿಸಿದರು.
ಮೇ 23ರ ನಂತರ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬರುತ್ತದೆ. ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಇನ್ನೇನು ಬೇಕು ಎಂದು ರಾಜ್ಯದಲ್ಲಿ ಕೂಡ ರಾಜಕೀಯ ಬದಲಾವಣೆ ಸಾಧ್ಯತೆಯ ಸುಳಿವು ನೀಡಿದರು.
ಪಕ್ಷದ ನಾಯಕರ ತಂಡ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಇಷ್ಟು ದಿನ ಬೇರೆ ಬೇರೆ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸ್ನೇಹಿತರು ಅಂಡಮಾನ್ನಲ್ಲಿ ಸಭೆ ಸೇರಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.