ಕರ್ನಾಟಕ

karnataka

ETV Bharat / state

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಕ್ರಮವಹಿಸಿ ; ಸಿಎಂ ಸೂಚನೆ - ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ

ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ. ಕೋವಿಡ್ 2ನೇ ಅಲೆಯ ಹಿನ್ನೆಲೆ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದೆ. ಇದಕ್ಕಾಗಿ ಬಿಡುಗಡೆಯಾಗಿರುವ 19 ಕೋಟಿ ರೂ.ಗಳಲ್ಲಿ 15.23 ಕೋಟಿ ರೂ.ಗಳನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು..

meeting
meeting

By

Published : Jun 1, 2021, 8:49 PM IST

ಬೆಂಗಳೂರು :ಡಿಎಪಿ ಮತ್ತು ಯೂರಿಯಾ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುತ್ತದೆ. ಉಳಿದಂತೆ ಬಿತ್ತನೆ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರ್ವ ಸಿದ್ಧತೆ ಕುರಿತಂತೆ ಸಭೆ ನಡೆಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ,ಸಹಕಾರ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ಈವರೆಗೆ ಚೆನ್ನಾಗಿ ಮಳೆಯಾಗಿದೆ. ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6-7ರ ವೇಳೆಗೆ ಮುಂಗಾರು ಪ್ರಾರಂಭವಾಗಲಿದೆ.

2020-21ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್​ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಳವಾಗಿದೆ. ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿದೆ. ಡಿಎಪಿ ಪೂರೈಕೆಯಲ್ಲಿದ್ದ ಸಮಸ್ಯೆ ಬಗೆಹರಿಸಲಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಸಭೆಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್​ಗಳು ಕಾರ್ಯನಿರ್ವಹಿಸುತ್ತಿವೆ.

ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ. ಕೋವಿಡ್ 2ನೇ ಅಲೆಯ ಹಿನ್ನೆಲೆ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದೆ. ಇದಕ್ಕಾಗಿ ಬಿಡುಗಡೆಯಾಗಿರುವ 19 ಕೋಟಿ ರೂ.ಗಳಲ್ಲಿ 15.23 ಕೋಟಿ ರೂ.ಗಳನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

2020-21ರಲ್ಲಿ ಕೃಷಿ ಸಾಲ ಗುರಿಗಿಂತ 16 ಶೇ.ಹೆಚ್ಚು ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿ ಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 21 ಸಾವಿರ ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿದೆ ಎಂದು ಸಿಎಂಗೆ ವಿವರ ನೀಡಿದರು.

ಬೆಂಬಲ ಬೆಲೆ ಬಾಕಿ ಪಾವತಿಸಿ :ಡಿಎಪಿ ಮತ್ತು ಯೂರಿಯಾ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ 1067 ಕೋಟಿ ರೂ. ಪಾವತಿಗೆ ಬಾಕಿ ಇದ್ದು, ಕೂಡಲೇ 250 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಎದುರಿಸಲು ಸಿದ್ಧತೆ :ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಹ ಸಿದ್ಧತೆ ನಡೆಸಲಾಗಿದೆ. ಪಂಚಾಯತ್‌ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಎನ್​​ಡಿಆರ್​ಎಫ್, ಎಸ್‌ಡಿಆರ್​​ಎಫ್ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರವಹಿಸುವಂತೆ ಸಿಎಂ ಸೂಚಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕಾ ಸಚಿವ ಶಂಕರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details