ಬೆಂಗಳೂರು: ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ನಾಯಕತ್ವ ಬದಲಾವಣೆ ಹೇಳಿಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಘಾಸಿ ಮಾಡಿದೆ. ಆದರೆ ಯಡಿಯೂರಪ್ಪ ನಾಯಕತ್ವದಲ್ಲೇ ನಾವು ಮುಂದುವರೆಯಲಿದ್ದೇವೆ, ಮುಖ್ಯಮಂತ್ರಿಯಾಗಿ ಅವರು ಅವಧಿ ಮುಗಿಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೋರಾಟದಿಂದ ಬಂದವರು, ಜನರಿಂದ ಬಂದವರು. ಜನರ ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿದವರು. ಅಧಿಕಾರ ಬಂದಾಗ ಆ ಜನರಿಗೋಸ್ಕರ ಅಭಿವೃದ್ಧಿ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ, ಪಕ್ಷ ನಿಷ್ಠರಾಗಿದ್ದಾರೆ ಎಂದರು.
2018 ರಲ್ಲಿ ಬಹುಮತ ಯಡಿಯೂರಪ್ಪ ಹೆಸರಿನಲ್ಲಿದೆ. ಹಳ್ಳಿ ಹಳ್ಳಿಗೆ ಹೋಗಿ ಪರಿವರ್ತನೆ ಯಾತ್ರೆ ಮಾಡಿ ಮತ ಕೇಳಿದಾಗ ಅವರಿಗೆ ಅತಿ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ನಾಯಕತ್ವಕ್ಕೆ ಹೆಚ್ಚಿನ ಸ್ಥಾನ ಕೊಟ್ಡಿದ್ದಾರೆ, ಬಹುಮತ ಇಲ್ಲದಾಗ 18 ಶಾಸಕರು ಯಡಿಯೂರಪ್ಪರನ್ನು ನಂಬಿ ಅವರನ್ನು ಸಿಎಂ ಮಾಡಲು ಬಂದ ಕಾರಣ ಸರ್ಕಾರ ರಚನೆಯಾಯಿತು. ಈಗ ಕೆಲವರು ಅಪಸ್ವರದ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಗಮನಿಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಈಗ ಅಪಸ್ವರ ಎತ್ತಿರುವವರೇ ಈ ಸರ್ಕಾರ ತರಲು ಏನೆಲ್ಲಾ ಪ್ರಯತ್ನ ಮಾಡಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಎರಡು ಬಾರಿ ಪ್ರವಾಹ, ಕೊರೊನಾ ಬಂತು. ಇದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರು ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ, ಕಾಲ ಕಾಲಕ್ಕೆ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಪ್ರತಿದಿನ ಸಭೆ ನಡೆಸಿ ನಿರ್ಧಾರ ಮಾಡುತ್ತಿದ್ದಾರೆ, ರಾಜ್ಯದ ಮೂಲೆ ಮೂಲೆ ಸ್ಥಿತಿಗತಿ ತಿಳಿದು ಹಣಕಾಸು ಬಿಡುಗಡೆ ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಸರ್ಕಾರಿ ನೌಕರರ ವೇತನ ಕಡಿತವಾಗಿದೆ. ಆದರೆ ಇಲ್ಲಿ ಅದಾಗಿಲ್ಲ, ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಹಗಲಿರುಳು ದುಡಿಯುತ್ತಿರುವ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪದೇ ಪದೇ ನಾಯಕತ್ವ ಬದಲಾವಣೆಯ ಗಾಳಿ ಸುದ್ದಿ ಬಿಡುತ್ತಿದ್ದಾರೆ, ಮುಂದಿನ ಸಿಎಂ ನಾನು, ಮುಂದಿನ ಸಿಎಂ ನೀನು ಎನ್ನುವ ವಿಚಾರ ಬಿಂಬಿಸುತ್ತಿರುವುದರಿಂದ ಯಡಿಯೂರಪ್ಪ ಅವರಿಗೆ ಬಹಳಷ್ಟು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.