ಬೆಂಗಳೂರು:ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯೇ ದೊಡ್ಡ ಸಂಕಟ ತಂದೊಡ್ಡಿದೆ.
ಸಚಿವ ಸಂಪುಟಕ್ಕೆ 13 ಮಂದಿ ಶಾಸಕರನ್ನು ತೆಗೆದುಕೊಳ್ಳಲು ಹೈಕಮಾಂಡ್ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಚಿವ ಸ್ಥಾನದ ಮೇಲೆ ಎರಡು ಡಜನ್‍ಗೂ ಅಧಿಕ ಶಾಸಕರು ಕಣ್ಣಿಟ್ಟಿದ್ದಾರೆ. ಯಾರನ್ನೇ ಕೈ ಬಿಟ್ಟರೂ ಮುಂದೊಂದು ದಿನ ಭಿನ್ನಮತಕ್ಕೆ ಎಡೆಮಾಡಿಕೊಡಬಹುದೆಂಬ ಆತಂಕ ಯಡಿಯೂರಪ್ಪನವರದ್ದು. ಇದೀಗ ಅಸಮಾಧಾನಿತ ಆಕಾಂಕ್ಷಿಗಳ ಮನವೊಲಿಸುವುದೇ ಸಿಎಂಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಆರಂಭದಲ್ಲೇ ಅಸಮಾಧಾನ ಶಮನ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಎಸ್.ಅಂಗಾರ, ಸುನೀಲ್‍ಕುಮಾರ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಸ್.ಎ.ರಾಮದಾಸ್, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ಎಸ್.ಎ.ರವೀಂದ್ರನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ಸಂಪುಟದಲ್ಲಿ 16 ಸ್ಥಾನಗಳು ಮಾತ್ರ ಖಾಲಿ ಇದ್ದು, ಕಾಂಗ್ರೆಸ್-ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರ ಪೈಕಿ 10 ಮಂದಿ ಹಾಗೂ ಮೂವರು ಮೂಲ ಬಿಜೆಪಿಯವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಮೂರು ಸ್ಥಾನಗಳು ಖಾಲಿ ಉಳಿಯುತ್ತವೆ.
ಹೀಗಾಗಿ ಇಂದು ತಮ್ಮ ನಿವಾಸದಲ್ಲಿ ಕೆಲವು ಆಪ್ತ ಶಾಸಕರ ಜೊತೆ ಮಾತುಕತೆ ನಡೆಸಿ ಸಚಿವ ಸ್ಥಾನ ಸಿಗದಿದ್ದರೂ ಯಾವುದೇ ರೀತಿಯ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಬಾರದು. ಮುಂದಿನ 6 ತಿಂಗಳಲ್ಲಿ ಸಂಪುಟ ಪುನರ್ ರಚನೆಯಾಗಲಿದ್ದು, ಸಚಿವ ಸ್ಥಾನ ವಂಚಿತರಿಗೆ ಆ ವೇಳೆ ಸ್ಥಾನಮಾನ ಕಲ್ಪಿಸುವ ಆಶ್ವಾಸನೆ ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದೀಗ ಉಪ ಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರ ಪೈಕಿ 10 ಮಂದಿಯನ್ನು ಸಂಪುಟಕ್ಕೆ ತೆಗೆದುಕೊಂಡರೆ ಹೊರಗುಳಿಯಲಿರುವ ಒಬ್ಬರನ್ನು ಹೇಗೆ ಮನವೊಲಿಸಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ. ಇನ್ನು ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್ ಇಬ್ಬರೂ ರಮೇಶ್ ಜಾರಕಿಹೊಳಿ ಆಪ್ತರು. ಇವರ ಸೂಚನೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಶ್ರೀಮಂತ್ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ರಮೇಶ್ ಜಾರಕಿಹೊಳಿ ಬೆಂಬಲಕ್ಕಿರುವುದರಿಂದ ಅಷ್ಟು ಸುಲಭವಾಗಿ ಅವರನ್ನು ಕಡೆಗಣಿಸುವಂತಿಲ್ಲ. ಯಡಿಯೂರಪ್ಪ ಈ ಬಿಕ್ಕಟ್ಟನ್ನು ಹೇಗೆ ಪರಿಹರಿಸುತ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಅದೇ ರೀತಿ ಮೂಲ ಬಿಜೆಪಿಯಿಂದ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸಂಪುಟಕ್ಕೆ ಬಂದರೆ ಉಳಿದ ಮೂಲ ಬಿಜೆಪಿ ಶಾಸಕರನ್ನು ಮನವೊಲಿಸುವುದು ಅಂದುಕೊಂಡಷ್ಟು ಸುಲಭವಾಗಿಲ್ಲ. ಇನ್ನೊಂದೆಡೆ ಉಪ ಚುನಾವಣೆಯಲ್ಲಿ ಸೋತಿರುವ ಹಿರಿಯ ನಾಯಕ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಸಹ ಸಚಿವ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿದಿರುವುದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.