ಬೆಂಗಳೂರು :ಬಿ ಎಸ್ ಯಡಿಯೂರಪ್ಪ ರಾಜೀನಾಮೆಗೆ ಒತ್ತಡ ಹಾಕಿರುವುದು ಸರಿಯಲ್ಲ. ಅವರಿಗೆ ಈಗ ಮದುವೆ ಮಾಡಿದರೆ ಎರಡು ಮಕ್ಕಳು ಆಗುತ್ತವೆ. ಅಷ್ಟು ಶಕ್ತಿ ಅವರಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ವಿಸ್ತೃತವಾಗಿ ರಾಜಕೀಯ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ಹೀಗೆ ಅಧಿಕಾರ ಹಿಂಪಡೆಯುವುದು ಒಳ್ಳೇ ಸಂಪ್ರದಾಯವಲ್ಲ. ನಾನು ಅವರ ಜಿಲ್ಲೆಯವನು. ಅವರ ಜಿಲ್ಲೆಯವನಾಗಿ ನಾನು ಅವರಿಗೆ ಧೈರ್ಯ ಹೇಳಲು ಬಂದಿದ್ದೆ. ನಾನು ಕಾಂಗ್ರೆಸ್ ಪಕ್ಷದವನಾಗಿ ಬಂದಿಲ್ಲ. ಮಲೆನಾಡಿನವನಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಲಸಿಗರ ಸ್ಥಿತಿ ಶೋಚನೀಯಕ್ಕೆ ತಿರುಗಿದೆ. ನಾನು ಮೊದಲೇ ಹೇಳಿದ್ದೆ. ನಮ್ಮ ಮನೆಯಲ್ಲಿ ಪ್ರೆಸ್‌ಮೀಟ್ ಕರೆದಾಗ ನಾನು ತಿಳಿಸಿದ್ದೆ. ರಾಜಕೀಯ ಇತಿಹಾಸ ಬದಲಾವಣೆ ಆಗುತ್ತೆ ಎಂದರು.
75 ವರ್ಷ ಎಂದು ಕೇಶವಕೃಪ ಕಾರಣ ಕೊಡುತ್ತಾರೆ. ಆದರೆ, ಕೇರಳದಲ್ಲಿ 80 ವರ್ಷ ದಾಟಿದವರನ್ನು ಕ್ಯಾಂಡಿಡೇಟ್ ಘೋಷಣೆ ಮಾಡುತ್ತೀರಿ ಎಂದು ಕಿಡಿಕಾರಿದರು. ಸೆಪ್ಟೆಂಬರ್‌ನಲ್ಲಿ ನಾವು ಕೂಡ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಭೆ ಮಾಡುತ್ತೇವೆ. ತಮಗೆಲ್ಲರಿಗೂ ಗೊತ್ತಿದೆ. ಜೂನ್, ಜುಲೈ, ಆಗಸ್ಟ್‌ನಲ್ಲಿ ರಾಜಕೀಯ ವಿಕೇಂದ್ರೀಕೃತ ಆಗುತ್ತೆ. ರಾಜಕೀಯ ಬದಲಾಗುತ್ತೆ ಅಂತಾ ಈ ಮೊದಲೇ ಹೇಳಿದ್ದೆ. ಯಡಿಯೂರಪ್ಪ ಅವರನ್ನ ಪರಿಗಣಿಸಲ್ಲ ಎಂದರು.
ಕೇಶವಕೃಪ ಎನ್ನುವುದು ಬಸವ ಕೃಪ ಆಗಿದೆ. ಆರುವರೆ ಕೋಟಿ ಜನರಿರೋ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ. ಹೀರಾ-ಪೀರಾ ಸಭೆ ಕರೆದು, ರಾಜ್ಯದ ಹಿತಾಸಕ್ತಿ ಕಾಪಾಡಲು ಏನು ಕ್ರಮಕೈಗೊಳ್ಳಬೇಕು ಅನ್ನೋದನ್ನ ಡಿಸೈಡ್ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಅಧಿಕಾರ ಇದ್ದಾಗ ನಾನು ದೂರ ಇರೋ ಮನುಷ್ಯ : ಈ ತಿಂಗಳಲ್ಲಿ ಅಲ್ಪಸಂಖ್ಯಾತರ ಸಭೆ ಕರೆದಿದ್ದೇನೆ. ಯಡಿಯೂರಪ್ಪ ಲವಲವಿಕೆಯಿಂದ ಇದ್ದಾರೆ. ರಾಜ್ಯಪಾಲರ ಹುದ್ದೆ ತಿರಸ್ಕರಿಸಿದ್ದಾರೆ. ಕನ್ನಡಿಗರು ನೀಡುವವರು, ಬೇಡುವವರಲ್ಲ. ಯಡಿಯೂರಪ್ಪ ಮೇಲೆ ಆರೋಪ, ಪ್ರತ್ಯಾರೋಪ ಇರಬಹುದು. ಅದು ಬೇರೆ ವಿಷಯ. ಅಧಿಕಾರ ಇದ್ದಾಗ ನಾನು ದೂರ ಇರೋ ಮನುಷ್ಯ. ರಾಜೀನಾಮೆ ನೀಡಿರೋದರಿಂದ ಭೇಟಿ ಮಾಡಲು ಬಂದಿದ್ದೇನೆ ಎಂದು ಮಾಹಿತಿ ನೀಡಿದರು.
ನನ್ನ ಅಂದಾಜಿನ ಪ್ರಕಾರ ನಡೆದಿದೆ : ಮುಂದುವರೆದು ಮಾತನಾಡಿ, ಒರಿಜಿನಲ್ ಕಾಪಿ ಇಲ್ಲ. ಝೆರಾಕ್ಸ್ ತಗೊಂಡ್ ಏನು ಮಾಡೋದು. ಸಿಎಂ ಯಾರೇ ಆಗಲಿ, ಅದನ್ನ ನಮ್ಮ ಜನ ಒಪ್ಪಲ್ಲ. ನಾನು ಏನ್ ಹೇಳಿದ್ರೂ, ನಂಬುತ್ತಿರಲಿಲ್ಲ. ಈಗ ನನ್ನ ಅಂದಾಜಿನ ಪ್ರಕಾರ ನಡೆದಿದೆ ಎಂದರು.
ನಾವು ಸಾಧು ಸಂತರ ಜೊತೆ ಇದ್ದವರು. ಮಠದ ಸ್ವಾಮಿಗಳು ಖಾವಿ ಹಾಕಿಕೊಂಡು ವಿದ್ಯೆ, ಅನ್ನ ಕೊಟ್ಟಿದ್ದಾರೆ. ಹಕ್ಕಿನ ಪ್ರಕಾರ ಕೇಳಿದ್ದಾರೆ ಎಂದು ಸ್ವಾಮಿಗಳ ರಾಜಕೀಯ ಎಂಟ್ರಿ ಬಗೆಗೆ ಅಭಿಪ್ರಾಯಪಟ್ಟರು.
ಹೊಸ ಮನೆ ಕಟ್ಟುತ್ತೇವೆ : ರಾಜ್ಯದಲ್ಲಿ ಹೊಸ ಪರ್ವ ಶುರುವಾಗಲಿದೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬರಲಿಲ್ಲ. ಮಠದ ದಾಸೋಹಿ ನಾನು. ಯಡಿಯೂರಪ್ಪ ಭೇಟಿ ಆಗಲು ಬಂದೆ. ನಮ್ಮ ನಾಡು, ನಮ್ಮ ನೆಲ, ನಮ್ಮ ಜಲ ನಮ್ಮ ನಾಯಕನನ್ನ ಆಯ್ಕೆ ಮಾಡಬೇಕಿದೆ. ಸೆಪ್ಟೆಂಬರ್ ನಂತರ ಎಲ್ಲವೂ ಗೊತ್ತಾಗಲಿದೆ. ಹೊಸ ಮನೆ ಕಟ್ಟುತ್ತೇವೆ ಎಂದು ಅಲ್ಪಸಂಖ್ಯಾತ ಮುಖಂಡ ಇಬ್ರಾಹಿಂ ಹೇಳಿದರು.
ಜೈ ವೀರಭದ್ರ ಎದ್ದೇಳು, ರುದ್ರಾ ರೆಡಿಯಾಗು :ಯಡಿಯೂರಪ್ಪ ಮುಖ್ಯಮಂತ್ರಿಯಗಿದ್ದಾಗ ನಾನು ಅವರ ಮನೆಗೆ ಹೋದವನಲ್ಲ. ಅವರ ಆಫೀಸಿಗೆ ಹೋದವನಲ್ಲ. ಈಗ ಅವರು ರಾಜೀನಾಮೆ ಕೊಟ್ಟಿದ್ದಾರೆ. ಅದು ಅಂಗೀಕಾರ ಆಗಿದೆ. ಅದಕ್ಕೆ ಬಂದೆ. ಜೈ ವೀರಭದ್ರ ಎದ್ದೇಳು, ರುದ್ರಾ ರೆಡಿಯಾಗಿ ಎಂದು ಧೈರ್ಯ ಹೇಳಿ ಬಂದಿದ್ದೇನೆ. ಸೆಪ್ಟೆಂಬರ್ ನಂತರ ರಾಜಕೀಯದಲ್ಲಿ ಹೊಸ ಬೆಳವಣಿಗೆ ನೋಡುತ್ತಿರಿ ಎಂದು ಬಾಂಬ್ ಸಿಡಿಸಿದ್ದಾರೆ.
ಓದಿ:ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..