ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಡೈನಾಮಿಕ್ ಆಗಿದ್ದಾರೆ. ಇವರು ಮತ್ತೊಬ್ಬ ಬಂಗಾರಪ್ಪ ಆಗಬೇಕು ಅನ್ನೋದು ನಮ್ಮ ಆಶಯ. ಬಜೆಟ್ಗೂ ಮೊದಲು ಶಿಕ್ಷಣ ಇಲಾಖೆ ಸುಧಾರಣೆಗೆ ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳ ಸಭೆ ಕರೆದು ಸಲಹೆ ಪಡೆಯಬೇಕು ಎಂದು ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ನಗರದ ಶಾಸಕರ ಭವನದಲ್ಲಿ ವೈ.ಎ. ನಾರಾಯಣಸ್ವಾಮಿ, ಶಶಿಲ್ ನಮೋಶಿ, ಅ. ದೇವೇಗೌಡ, ಚಿದಾನಂದ ಗೌಡ, ಅರುಣ್ ಶಾಪುರ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಮೊದಲು ಮಾತನಾಡಿದ ನಾರಾಯಣಸ್ವಾಮಿ, ಸರ್ಕಾರ ಬದಲಾಗಿವಣೆಯಾಗಿದೆ. ಹೊಸ ಸಿಎಂ, ಡಿಸಿಎಂ, ಮಂತ್ರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಮುಂದೆ ದೊಡ್ಡ ಸವಾಲಿದೆ. ಶಿಕ್ಷಣ ಇಲಾಖೆ ಮಹತ್ವದ ಇಲಾಖೆ. ಜವಾಬ್ದಾರಿಯಿಂದ ನಡೆದುಕೊಳ್ಳುವ ಅವಶ್ಯಕತೆ ಇದೆ. ಸರ್ಕಾರ ಬಂದು ಕೆಲವೇ ದಿನಗಳಾದರೂ ವೇಗ ನೋಡಿ ಖುಷಿಯಾಗಿದೆ. ಶಿಕ್ಷಣ ಕ್ಷೇತ್ರದ ಪ್ರಣಾಳಿಕೆ ಬಗ್ಗೆ ಗಮನ ಸೆಳೆಯುವ ಕೆಲಸ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಆಗುತ್ತಿದೆ. ಬೇಗ ವರ್ಗಾವಣೆ ಮಾಡಿ ಮುಗಿಸಬೇಕು. ಹಿಂದಿನ ಸರ್ಕಾರ ಸರ್ಕಾರಿ ನೌಕರರಿಗೆ 17% ರಿಲೀಫ್ ಫಂಡ್ ಕೊಟ್ಟಿದ್ದೆವು. 7ನೇ ವೇತನ ಆಯೋಗದ ವರದಿ ತರಿಸಿಕೊಂಡು ಜಾರಿಗೆ ತರಬೇಕು, ಈ ವರ್ಷವೇ ಜಾರಿಗೆ ತರುವಂತೆ ಆಗ್ರಹಿಸಿದರು. ಹೊಸ ಸರ್ಕಾರ ಬಂದ ಬಳಿಕ ಪಠ್ಯಪುಸ್ತಕ ಪರಿಷ್ಕರಣೆ ಬಹಳ ಸದ್ದುಮಾಡುತ್ತಿದೆ. ಕೆಲ ಸಾಹಿತಿಗಳು ಸಿಎಂ ಹಾಗೂ ಶಿಕ್ಷಣ ಸಚಿವರ ಹಿಂದೆ ಮುಂದೆ ತಿರುಗುತ್ತಿದ್ದಾರೆ, ಅವರ ಸಾಹಿತ್ಯ ತುರುಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಅನೇಕರು ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದವರಿದ್ದಾರೆ. ಅವರಿಂದ ಸಲಹೆ ಪಡೆಯಿರಿ. ಕೆಲವರ ಮಾತು ಕಟ್ಟಿಕೊಂಡು ಪಠ್ಯ ಬದಲಾವಣೆಯಂತಹ ರೀತಿ ಹೆಜ್ಜೆ ಇಡಬೇಡಿ. ಇದು ನಿಮಗೆ ಸಂಕಷ್ಟ ತರಲಿದೆ. ಈಗಾಗಲೇ ಪಠ್ಯ ಶಾಲೆಗೆ ತಲುಪಿದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಏನೆಲ್ಲಾ ಪಠ್ಯ ಕೊಡಬಹುದು ಅಂತ ನಿಮ್ಮ ಸಚಿವರ ಸಲಹೆ ಪಡೆಯಿರಿ ಎಂದು ಮನವಿ ಮಾಡಿದರು.