ಕರ್ನಾಟಕ

karnataka

ETV Bharat / state

ಕೆಆರ್‌ಪುರಂ ಅಭಿವೃದ್ಧಿ ಕಾಮಗಾರಿಯಲ್ಲಿ ಸರ್ಕಾರಕ್ಕೆ 100 ಕೋಟಿ ಕಿಕ್ ಬ್ಯಾಕ್.. ಉಗ್ರಪ್ಪ ಆರೋಪ - ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ

ಕೆಆರ್‌ಪುರಂ ಅನರ್ಹ ಶಾಸಕರು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ತಮ್ಮ ಅನುಯಾಯಿಗಳಿಗೆ, ಸಿಎಂಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ? ಬಿಜೆಪಿ ನಾಯಕರಿಗೆ ಎಷ್ಟು ಪಾಲು ಹೋಗಿದೆ? ಅನರ್ಹ ಶಾಸಕರಿಗೆ ಎಷ್ಟು ಪಾಲು ಹೋಗಿದೆ? ತಕ್ಷಣವೇ ಕಾನೂನು ರೀತಿ ತನಿಖೆಯಾಗಬೇಕೆಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.

ಉಗ್ರಪ್ಪ

By

Published : Oct 16, 2019, 8:00 PM IST

ಬೆಂಗಳೂರು:ಕೆಆರ್‌ಪುರಂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ರಾಜ್ಯ ಸರ್ಕಾರ 100ಕೋಟಿ ರೂ. ಗಳಿಸಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಟೆಂಡರ್ ಇಲ್ಲದೆ 500ಕೋಟಿ ರೂ. ಕಾಮಗಾರಿ ನೀಡಲಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರಿಗೆ ಅವಕಾಶ ನೀಡಿದೆ. ಆದೇಶ ಮಾಡಿರುವುದೇ ಕಾನೂನು ಬಾಹಿರ. ಇದರಿಂದ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ. ಶೇ.15ರಿಂದ 20ರಷ್ಟು ಕಮಿಷನ್ ಪಡೆಯಲಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು. ಹೈಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಇದರಲ್ಲಿ ಯಾರಿಗೆ ಎಷ್ಟು ಪಾಲು ಹೋಗಿದೆ ಗೊತ್ತಾಗಬೇಕು. ಮೊದಲು ಈ ಕಾಮಗಾರಿಯನ್ನ ರದ್ಧುಪಡಿಸಬೇಕು. ಬೇರೆ ಕ್ಷೇತ್ರಗಳಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ಮತದಾರರ ಓಲೈಕೆಗೆ ಇಂತಹ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಕೆಆರ್‌ಪುರಂ ಅಭಿವೃದ್ಧಿ ಕಾಮಗಾರಿಯಲ್ಲಿ ಸರ್ಕಾರಕ್ಕೆ 100 ಕೋಟಿ ಕಿಕ್ ಬ್ಯಾಕ್?

ಅನರ್ಹ ಶಾಸಕರಿಗೆ ಕಮಿಷನ್:ಕೆಆರ್‌ಪುರಂ ಕ್ಷೇತ್ರದ ಕಾಮಗಾರಿಗಳನ್ನು ಕೆಆರ್​ಐ​ಡಿಎಲ್​ಗೆ ನೀಡಿದ ವಿಚಾರ‌ ಮಾತನಾಡಿ, ಕೆಆರ್‌ಪುರಂ ಅನರ್ಹ ಶಾಸಕರು ಈ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ತಮ್ಮ ಅನುಯಾಯಿಗಳಿಗೆ, ಸಿಎಂಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ? ಬಿಜೆಪಿ ನಾಯಕರಿಗೆ ಎಷ್ಟು ಪಾಲು ಹೋಗಿದೆ? ಅನರ್ಹ ಶಾಸಕರಿಗೆ ಎಷ್ಟು ಪಾಲು ಹೋಗಿದೆ? ತಕ್ಷಣವೇ ಕಾನೂನು ತನಿಖೆ ಮಾಡಿ ಕೆಆರ್​ಐಡಿಎಲ್​ಗೆ ನೀಡಿರುವ ಗುತ್ತಿಗೆ ವಾಪಸ್ ಪಡೆಯಬೇಕು. ಬಿಜೆಪಿ ಅಂದರೆ ಭ್ರಷ್ಟ ಜನರಿಂದ ಕೂಡಿರುವ ಸರ್ಕಾರವಾಗಿದೆ ಎಂದು ಆರೋಪಿಸಿದರು.

ಟೆಂಡರ್​ನಲ್ಲಿ ರಾಜಕಾರಣ:ಕೆಆರ್‌ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನವ ನಗರೋತ್ಥಾನ ಯೋಜನೆಯಡಿ ಟೆಂಡರ್ ಇಲ್ಲದೇ ಕೋಟ್ಯಂತರ ರೂ. ಕಾಮಗಾರಿ ನಡೆದಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಭೈರತಿ ಬಸವರಾಜ್ ಕ್ಷೇತ್ರಕ್ಕೆ 300 ಕೋಟಿ ರೂ. ದಿಢೀರ್ ಅನುದಾನ ನೀಡಲಾಗಿದೆ. ಅನುದಾನವನ್ನ ಎರಡು ಕೋಟಿ ಮೀರದಂತೆ ತುಂಡು ಗುತ್ತಿಗೆ ನೀಡ್ತಾ ಇರೋ ಸರ್ಕಾರ ಕೆಆರ್​ಐಡಿಎಲ್ ಮೂಲಕ ಕಾಮಗಾರಿಗೆ ಮುಂದಾಗಿದೆ. 300 ಕೋಟಿ ರೂ. ಬೃಹತ್ ಮೊತ್ತಕ್ಕೆ ಟೆಂಡರ್ ಇಲ್ಲದೇ ಎರಡು ಕೋಟಿ ಮೀರದಂತೆ ತುಂಡು ಗುತ್ತಿಗೆ ನೀಡಲಾಗುತ್ತಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಆಪ್ತರಿಗೆ ಗುತ್ತಿಗೆ ನೀಡಲಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಟೆಂಡರ್ ನಲ್ಲಿ ಭಾರಿ ಅಕ್ರಮ:ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರಿನ 28 ಕ್ಷೇತ್ರಗಳಿಗೆ ಸರ್ಕಾರದ ಅನುದಾನ ಬಿಡುಗಡೆ ಮಾಡಿದೆ. 8,015 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮತಿ ನೀಡಿದೆ. ಇದರಲ್ಲಿ ಕೆಆರ್‌ಪುರಂಗೆ 200 ಕೋಟಿ ರೂ. ಒದಗಿಸಲಾಗಿದೆ. ಟೆಂಡರ್ ಇಲ್ಲದೆ ನೂರಾರು ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿಕಾಮಗಾರಿಗೆ 2 ಕೋಟಿ ರೂ. ನಿಗದಿಪಡಿಸಲಾಗಿದೆ. ಒಟ್ಟು 500 ಕೋಟಿ ರೂ. ಕಾಮಗಾರಿಗೆ ಅವಕಾಶ ನೀಡಲಾಗಿದೆ. ಟೆಂಡರ್ ಇಲ್ಲದೆ ಕಾಮಗಾರಿಗೆ ಅವಕಾಶವಿಲ್ಲ. ಆದರೆ, ಕಾಮಗಾರಿಗೆ ಹೇಗೆ ಅವಕಾಶ ನೀಡಲಾಗಿದೆ? ಇದು ನಿಯಮಬಾಹಿರವಾಗಿದೆ. ಅಲ್ಲದೆ ಉಪಚುನಾವಣೆ ಎದುರಾಗಿರುವ ಕ್ಷೇತ್ರಕ್ಕೆ ನೀಡಿದೆ. ಇದರ ವಿರುದ್ದ ತನಿಖೆ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details