ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪಗಳನ್ನು ಲಘುವಾಗಿ ಪರಿಗಣಿಸಿದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಕಡೆಗಣಿಸಿದ್ದು ಹಾಗು ಟಿಕೆಟ್ ಹಂಚಿಕೆಯಲ್ಲಿನ ಹೊಸ ಪ್ರಯೋಗಗಳು, ಕನ್ನಡ ಅಸ್ಮಿತೆ ಕಡೆಗಣನೆಯಂತಹ ಆರೋಪಗಳು, ಮೀಸಲಾತಿ ವಿಚಾರದಲ್ಲಿ ಮಾಡಿಕೊಂಡ ಎಡವಟ್ಟಿನ ಕಾರಣದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸ್ವಯಂಕೃತ ಅಪರಾಧಗಳೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜನತೆ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದರೂ ಬಿಜೆಪಿ ಅದನ್ನು ಕಡೆಗಣಿಸಿದ್ದೇ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ನಾಯಕರೆಲ್ಲರೂ ಕೇವಲ ಡಬಲ್ ಇಂಜಿನ್ ಸರ್ಕಾರ ಎನ್ನುವ ಘೋಷವಾಕ್ಯವನ್ನು ಹೇಳುತ್ತ ರಾಜ್ಯದಲ್ಲಿದ್ದ ಆಡಳಿತ ವಿರೋಧಿ ಅಲೆಯನ್ನು ನೋಡದೆ ಕಣ್ಮುಚ್ಚಿ ಕುಳಿತರು. ಈ ಹಿಂದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ಈಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಪರಿಣಾಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ.
ಬಿಜೆಪಿ ಭರವಸೆಗೆ ಮನ್ನಣೆ ನೀಡದ ಜನ: ಬಹುಮುಖ್ಯವಾಗಿ ಹಿಂದಿ ಹೇರಿಕೆ ಆರೋಪ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ಎಡವಿದೆ. ಸಾಕಷ್ಟು ಬಾರಿ ಹಿಂದಿ ಹೇರಿಕೆ ಆರೋಪಗಳು ಬಂದರೂ ಅದನ್ನು ಕಡೆಗಣಿಸಿದ್ದ ಬಿಜೆಪಿ ಅಪವಾದ ನಿರ್ವಹಣೆಯಲ್ಲಿ ವಿಫಲವಾಯಿತು. ಕನ್ನಡ ನಾಡು ನುಡಿಯ ಅಸ್ಮಿತೆಗೆ ಧಕ್ಕೆ ತರಬಹುದು ಎನ್ನುವ ಭೀತಿ ಹುಟ್ಟಿಸಿದ ಹಿಂದಿ ಹೇರಿಕೆ ವಿವಾದಕ್ಕೆ ಬಿಜೆಪಿ ಈಗ ಬೆಲೆ ತೆತ್ತಿದೆ. ಇದು ಸಾಲದು ಎನ್ನುವಂತೆ ಅಮೂಲ್ ಜೊತೆ ನಂದಿನಿ ವಿಲೀನ ಮಾಡುವ ಚರ್ಚೆಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಅಂತಹ ಪ್ರಸ್ತಾಪವಿಲ್ಲ ಎನ್ನುವ ಹೇಳಿಕೆ ಬಿಟ್ಟರೆ ಸರಿಯಾದ ಸಮರ್ಥನೆ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಚುನಾವಣೆ ವೇಳೆ ಅದರ ಗಂಭೀರತೆ ಅರ್ಥವಾದಾಗ ಪ್ರಣಾಳಿಕೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲು ಪೂರೈಕೆ ಮಾಡುವ ಭರವಸೆ ನೀಡಿತು. ಆದರೆ ಈ ಭರವಸೆಗೆ ರಾಜ್ಯದ ಜನ ಮನ್ನಣೆ ನೀಡಲಿಲ್ಲ. ಅದರಲ್ಲಿಯೂ ಹಳೆ ಮೈಸೂರು ಭಾಗದ ಮತದಾರರು ಬಿಜೆಪಿಯನ್ನು ಬಹುತೇಕವಾಗಿ ಗುಡಿಸಿ ಹಾಕಿದರು ಎನ್ನಲಾಗುತ್ತಿದೆ.
ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಕಡೆಗಣನೆ: ಇನ್ನು ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯೋಗ ನಡೆಸುವ ಹೆಸರಿನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದವರನ್ನೂ ಕಣದಿಂದ ದೂರ ಉಳಿಯುವಂತೆ ಮಾಡಿ ಒತ್ತಾಯವಾಗಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವಂತೆ ಮಾಡಲಾಯಿತು. ಹೊಸಬರಿಗೆ ಟಿಕೆಟ್ ನೀಡಿ ಹಿರಿಯರಿಗೆ ಟಿಕೆಟ್ ನಿರಾಕರಿಸಿ ಗೊಂದಲ ಸೃಷ್ಟಿಸಿತು. ದೊಡ್ಡಮಟ್ಟದ ಅಸಮಾಧಾನ ಭುಗಿಲೆದ್ದರೂ ಅದನ್ನು ಪಕ್ಷ ಕಡೆಗಣಿಸಿತು. ಹಲವು ಕಡೆ ಬಂಡಾಯ ಅಭ್ಯರ್ಥಿಗಳು ನಿಂತರೂ ಮನವೊಲಿಕೆ ಕಾರ್ಯ ಕಡೆಗಣಿಸಲಾಯಿತು. ಶೆಟ್ಟರ್, ಸವದಿ ಪಕ್ಷ ತೊರೆಯಲು ಮುಂದಾದಾಗ ಸರಿಯಾಗಿ ಮನವೊಲಿಕೆ ಮಾಡದೆ ಮರಳಿ ಅಧಿಕಾರಕ್ಕೆ ಬರುವ ಅತಿಯಾದ ಆತ್ಮವಿಶ್ವಾಸದಿಂದ ಇಬ್ಬರು ನಾಯಕರನ್ನು ಕಡೆಗಣಿಸಲಾಯಿತು. ಇದು ಬಿಜೆಪಿಗೆ ಮುಳುವಾಯಿತು ಎನ್ನಲಾಗುತ್ತಿದೆ.