ಬೆಂಗಳೂರು:ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿರುವ ತಳಸಮುದಾಯಗಳ ಮೀಸಲಾತಿಗಾಗಿ ವರದಿ ಸಿದ್ಧಪಡಿಸುವಂತೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ (ಇಡಬ್ಲ್ಯೂಎಸ್) 3 ದಿನಗಳಲ್ಲೇ ಮೀಸಲಾತಿ ನೀಡಿದ್ದರು ಎಂದು ಸಾಹಿತಿ ದೇವನೂರು ಮಹಾದೇವ ಬೇಸರ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿ) ಕರೆ ನೀಡಿರುವ 'ರಾಜಭವನ್ ಚಲೋ-ಜನವಿರೋಧಿ ಮತ್ತು ಕಾರ್ಪೊರೇಟ್ ನೀತಿಗಳ ವಿರುದ್ಧ ದುಡಿಯುವ ಜನರ ಮಹಾಧರಣಿ' ಕುರಿತಂತೆ ಸಂಯುಕ್ತ ಹೋರಾಟ ಕರ್ನಾಟಕ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯವರು ಹೈದರಾಬಾದ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾದಿಗ ದಂಡೋರ ನಾಯಕ ಕೃಷ್ಣ ಮಾದಿಗ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಳೆದ 30 ವರ್ಷಗಳಿಂದ ಹೋರಾಡುತ್ತಿರುವ ತಳಸಮುದಾಯಗಳ ಒಳಮೀಸಲಾತಿಗಾಗಿ ವರದಿ ಸಿದ್ಧಪಡಿಸಲು ಸೂಚಿಸಿದ್ದರು. ಆದರೆ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಇಡಬ್ಲ್ಯೂಎಸ್ ಮೀಸಲಾತಿ ನೀಡಲು ಯಾವುದೇ ವರದಿ ಕೇಳದೆ ಮೂರೇ ದಿನದಲ್ಲಿ ನೀಡಿದ್ದರು ಎಂದು ದೂರಿದರು.
ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಧರ್ಮ-ಧರ್ಮಗಳ ನಡುವೆ, ಬಡವ-ಬಲ್ಲಿದರ ನಡುವೆ, ಜಾತಿ-ಜಾತಿಗಳ ನಡುವೆ ಕಂದಕ ತೋಡುತ್ತಿದೆ. ಇದು ಭಾರತವನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಎಂಬುದೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದು ಚಾತುರ್ವರ್ಣ ಹಿಂದುತ್ವವು ವಿಶಾಲ ಹಿಂದೂ ಸಮುದಾಯ, ಇತರ ಧರ್ಮಗಳು, ಪಂಥಗಳು ನಂಬಿಕೆಗಳ ಮೇಲೆ ಯುದ್ಧ ಸಾರಿದೆ. ಶೇ.10 ಇರುವ ಮೇಲ್ವರ್ಗ ರಕ್ಷಿಸುತ್ತ ಉಳಿದ ಶೇ.90 ಜನಸ್ತೋಮವನ್ನು ತುಳಿಯುತ್ತಿದೆ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಬಾಯಿಗೆ ಹಾಕುತ್ತಿದೆ. ಸಾರ್ವಜನಿಕ ಸಂಪತ್ತನ್ನು ಕಾರ್ಪೋರೇಟ್ ಬಾಯಿಗೆ ಹಾಕುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಅರೆಜೀವವನ್ನಾಗಿ ಮಾಡಲಾಗುತ್ತಿದೆ. ಈ ರೀತಿ ರಾಜ್ಯಭಾರ ನಡೆಯುತ್ತಿರುವುದರಿಂದಲೇ, ಕೃಷಿ, ಕಾರ್ಮಿಕ, ಅರಣ್ಯ, ಶಿಕ್ಷಣ ಕಾಯ್ದೆಗಳನ್ನು ವಿಕಾರವಾಗಿ ತಿರುಚುತ್ತಿದ್ದಾರೆ. ಇದರ ಪರಿಣಾಮ ಕೃಷಿಕರು ತಮ್ಮಲ್ಲಿದ್ದ ಭೂಮಿಯನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ ಬೀದಿಗೆ ಬೀಳುವಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.