ಹಲಸೂರು ಸ್ಮಶಾನದಲ್ಲಿ ಶಕ್ತಿ ದೇವತೆ ಕಾಳಿ ದೇವಿಯ ಪೂಜೆಯನ್ನು ವಿಭಿನ್ನ ಮತ್ತು ವಿಶೇಷ ಎನ್ನುವ ರೀತಿ ಮಾಡಲಾಯಿತು. ಈ ಒಂದು ಪೂಜೆ ಸುಮಾರು ರಾತ್ರಿ12 ಗಂಟೆಗೆ ಶುರುವಾಗಿತ್ತು. ಮಣ್ಣಿನಲ್ಲಿ ಕಾಳಿ ವಿಗ್ರಹ ನಿರ್ಮಿಸಿ ಹಬ್ಬ ಆಚರಣೆ ಮಾಡಿದ ಜನರು ತಮ್ಮ ಪಾರಂಪರಿಕವಾಗಿ ಬಂದಿರುವ ಹಬ್ಬದ ಪ್ರಕಾರ, ಕಾಳಿ ದೇವಿಗೆ ದೃಷ್ಟಿ ನೀಡುವ ವಿಶೇಷ ಪೂಜೆ ನೆರವೇರಿಸಿದರು.
ಸ್ಮಶಾನದಲ್ಲಿ ಕಾಳಿಕಾ ಮಾತೆಗೆ ಪೂಜೆ... ಇನ್ನೂ ಈ ಹಬ್ಬವನ್ನು ಒಂದೊಂದು ಸಮುದಾಯದಿಂದ ಒಂದೊಂದು ವಸ್ತು ತಂದು ಪೂಜೆ ಮಾಡಿದ್ದು ವಿಶೇಷವಾಗಿತ್ತು.
ವರ್ಷಕ್ಕೊಮ್ಮೆ ತಾಯಿಗೆ ದೃಷ್ಟಿ ಕೊಟ್ಟು, ರಕ್ತವನ್ನು ನೈವೇದ್ಯ ಮಾಡಿ ನಂತರ ಊರಿನ ಸುತ್ತಲೂ ಅನ್ನ ಎರಚುವ ಮೂಲಕ ಕೆಟ್ಟ ಶಕ್ತಿಗಳನ್ನ ದೂರ ಮಾಡುವ ಆಚರಣೆ ಇದಾಗಿದೆ.
ಶಿವರಾತ್ರಿ ಮುಗಿದ ಮೇಲೆ ಕಾಳಿ ಮಾತೆಯ ಆರಾಧನೆ ಪ್ರತಿ ವರ್ಷ ಮಾಡುತ್ತಾ ಬಂದಿದ್ದಾರೆ.
ಈ ಪೂಜೆಯಲ್ಲಿ ತಾಯಿಯ ಮಣ್ಣಿನ ಮೂರ್ತಿಯ ಬಾಯಲ್ಲಿ ನಿಂಬೆಹಣ್ಣು ಇಟ್ಟು ನಂತರ ಅದನ್ನು ಮನೆಯಲ್ಲಿ ಕಟ್ಟಿದರೆ, ದುಷ್ಟಶಕ್ತಿಯಿಂದ ಮುಕ್ತಿ ಪಡೆಯಬಹುದು ಎಂಬ ಪ್ರತೀತಿ ಇದೆ. ನಂತರ ತಾಯಿಯ ವಿಗ್ರಹವನ್ನು ಮಣ್ಣಿನಲ್ಲಿ ಮುಚ್ಚಿ ನಿತ್ಯ ಮುಂದಿನ ವರ್ಷದವರೆಗೆ ಪೂಜೆ ಮಾಡಲಾಗುತ್ತದೆ. ಕೇವಲ ನಮ್ಮ ರಾಜ್ಯವಲ್ಲದೆ ಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಭಕ್ತರು ಬಂದು ಈ ಪೂಜೆಯಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.