ಬೆಂಗಳೂರು: ಪೌಷ್ಟಿಕಾಂಶಗಳ ಕಣಜ, ಬಾಣಂತಿಯರ ಅಚ್ಚುಮೆಚ್ಚಿನ ಸಿಹಿ ತಿನಿಸು, ಅಮೀನಗಡದ ಸುಪ್ರಸಿದ್ಧ ವಿಜಯಾ ಕರದಂಟು ತನ್ನ ನಾಲ್ಕನೇ ಮಳಿಗೆಯನ್ನು ಜಯನಗರದಲ್ಲಿ ಆರಂಭಿಸಿದೆ. ಶಾಸಕಿ ಸೌಮ್ಯಾರೆಡ್ಡಿ ಮಳಿಗೆಗೆ ಚಾಲನೆ ನೀಡಿ, ಇದೇ ಮೊದಲ ಬಾರಿಗೆ ತಯಾರಿಸಿದ ವಿಶ್ವದ ಅತಿ ದೊಡ್ಡ 1000 ಕೆಜಿ ತೂಕದ ಕರದಂಟನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ 'ಯಾವ ಮಾಡ್ಯಾನ ಬಂಟ, ತಿಂದಷ್ಟು ರುಚಿ ಉಂಟ ಅಮೀನಗಡ ಕರದಂಟ' ಎನ್ನುವ ಗಾದೆಗೆ ತಕ್ಕಂತೆ ಇದು ರುಚಿಯ ಜೊತೆಗೆ ಪುಷ್ಟಿ ನೀಡುವ ಡ್ರೈ ಫ್ರುಟ್ಗಳಿಂದ ಮಾಡಿರುವುದರಿಂದ ಬಾಣಂತಿಯರು ಸೇರಿದಂತೆ ದಷ್ಟಪುಷ್ಟ ದೇಹಸಿರಿ ಹೊಂದುವ ಪ್ರತಿಯೊಬ್ಬರಿಗೂ ಇದು ಅತ್ಯುಪಯುಕ್ತವಾಗಿದೆ ಎಂದು ಹೇಳಿದರು.
ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕು ವರ್ಷಗಳ ಹಿಂದೆ ಮೊದಲ ಮಳಿಗೆ ಆರಂಭಿಸಿದ್ದೆವು. ಜಯನಗರದಲ್ಲಿ ನಾಲ್ಕನೇ ಮಳಿಗೆಗೆ ಚಾಲನೆ ನೀಡಿದ್ದೇವೆ. ಗ್ರಾಹಕರ ಬೇಡಿಕೆಯನ್ನಾಧರಿಸಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರತಿಷ್ಠಿತ ಪ್ರದೇಶಗಳಲ್ಲಿ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ವಿಜಯಾ ಕರದಂಟು ಮಾಲೀಕ ಸಂತೋಷ್ ಐಹೊಳ್ಳಿ ಹೇಳಿದರು.