ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪ್ರತಿ ವರ್ಷ 35 ಸಾವಿರ ಮಂದಿ ಪಾರ್ಶ್ವವಾಯುಗೆ ಬಲಿ: ನಿಮ್ಹಾನ್ಸ್ ನಿರ್ದೇಶಕ ಡಾ.ಗುರುರಾಜ್ - workshop on Paralysis ion Vidhana Soudha

ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ವಿಧಾನ ಸೌಧದದ ಸಮಿತಿ ಸಭಾಂಗಣದಲ್ಲಿ ವೈದ್ಯರು ಹಾಗೂ ನರ್ಸ್‌ಗಳಿಗೆ ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

World Paralysis Day in Bengaluru
ವಿಧಾನಸೌಧದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ ನಡೆಯಿತು

By

Published : Oct 29, 2020, 8:55 PM IST

ಬೆಂಗಳೂರು: ರಾಜ್ಯದಲ್ಲಿ ಪಾರ್ಶ್ವವಾಯು ಪ್ರಕರಣ ಏರಿಕೆಯಾಗುತ್ತಿದ್ದು, ಪ್ರತಿ ವರ್ಷ 35 ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ ಎಂಬ ಕಳವಳಕಾರಿ ಮಾಹಿತಿಯನ್ನು ನಿಮ್ಹಾನ್ಸ್ ನಿರ್ದೇಶಕ ಡಾ.ಡಿ.ಗುರುರಾಜ್ ತಿಳಿಸಿದರು.

ವಿಧಾನ ಸೌಧದದ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಪಾರ್ಶ್ವವಾಯು ದಿನ’ದ ಪ್ರಯುಕ್ತ ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ವೈದ್ಯರು ಹಾಗೂ ನರ್ಸ್‌ಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ವರ್ಷ 70 ರಿಂದ 80 ಸಾವಿರ ಜನರು ಪಾರ್ಶ್ವವಾಯು (ಸ್ಟ್ರೋಕ್) ಪೀಡಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ ಪಾರ್ಶ್ವವಾಯು ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ, ಸ್ಟ್ರೋಕ್ ನಿಯಂತ್ರಣಕ್ಕೆ ತರಲು ಜನರಲ್ಲಿ ಜಾಗೃತಿ, ತ್ವರಿತ ಚಿಕಿತ್ಸಾ ಕ್ರಮಗಳು ಅಗತ್ಯವಾಗಿದೆ ಎಂದರು.

ವಿಧಾನಸೌಧದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ ನಡೆಯಿತು

ರಾಜ್ಯದಲ್ಲಿ ಸದ್ಯದ ಅಂಕಿ-ಅಂಶಗಳ ಪ್ರಕಾರ, 6 ಲಕ್ಷ ಪಾರ್ಶ್ವವಾಯು ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ 1 ಲಕ್ಷ ಜನರ ಪೈಕಿ 119 ರಿಂದ 145 ಜನರು ಪಾರ್ಶ್ವವಾಯು ಬಾಧಿತರಾಗುತ್ತಿದ್ದಾರೆ. ವಾರ್ಷಿಕ 1 ಲಕ್ಷ ಪಾರ್ಶ್ವವಾಯು ರೋಗಿಗಳ ಪೈಕಿ 73 ಸಾವಿರ ಜನರು ಮರಣ ಹೊಂದುತ್ತಿದ್ದಾರೆ. ಆರು ಜನರಲ್ಲಿ ಒಬ್ಬರು ಪಾರ್ಶ್ವವಾಯುಗೆ ಈಡಾಗುತ್ತಾರೆ ಎಂದು ವಿವರಿಸಿದರು.

ಬಡವರು ರೋಗ ಪೀಡಿತರಾದರೆ ಚಿಕಿತ್ಸೆ, ಪುನರ್ವಸತಿ ಕಷ್ಟವಾಗಲಿದೆ. ವ್ಯಾಯಾಮ, ದೈಹಿಕ ಚಟುವಟಿಕೆಗಳ ಕೊರತೆ, ಸರಿಯಾದ ವೇಳೆಗೆ ಊಟ-ಉಪಾಹಾರ ಮಾಡದಿರುವುದು, ಧೂಮಪಾನ, ಮದ್ಯಪಾನ ಮುಂತಾದ ದುಷ್ಚಟಗಳಿಂದಾಗಿ ಪಾರ್ಶ್ವವಾಯು ಬಾಧಿತರು ಹೆಚ್ಚುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿನೂತನ ಕಾರ್ಯಕ್ರಮ :

ಪರಿಸ್ಥಿತಿ ಗಂಭೀರತೆ ಅರಿತ ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಪಾರ್ಶ್ವವಾಯು ನಿಯಂತ್ರಣ ಮತ್ತು ನಿರ್ವಹಣೆಗಾಗಿ ವಿನೂತನ ಕಾರ್ಯಕ್ರಮ ರೂಪಿಸಿದೆ‌. ಸಕಾಲಕ್ಕೆ ರೋಗ ಗುರುತಿಸುವುದು, ಸ್ಟ್ರೋಕ್ ಆರೈಕೆ ಕೇಂದ್ರ ತೆರೆಯುವುದು, ತ್ವರಿತ ಮತ್ತು ಉತ್ತಮ ಚಿಕಿತ್ಸೆ, ಮುಂಜಾಗ್ರತೆ, ಸಾಮರ್ಥ್ಯ ವೃದ್ಧಿ ಇತ್ಯಾದಿ ಚಟುವಟಿಕೆಗಳನ್ನು ವಿನೂತನ ಕಾರ್ಯಕ್ರಮ ಒಳಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಭಾಗವಾಗಿ ಮೊದಲ ಹಂತದಲ್ಲಿ ಬೆಂಗಳೂರಿನ 16 ಆಸ್ಪತ್ರೆಗಳ ವೈದ್ಯರು, ನರ್ಸ್​ಗಳಿಗೆ ತರಬೇತಿ ನೀಡಲಾಗುತ್ತದೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನ, ನಿಮ್ಹಾನ್ಸ್ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ತರಬೇತಿ, ಸಾಮರ್ಥ್ಯ, ಚಿಕಿತ್ಸಾ ಸವಲತ್ತುಗಳ ವೃದ್ಧಿ, ತ್ವರಿತ ಕ್ರಮ ಹಾಗೂ ಜನ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

For All Latest Updates

ABOUT THE AUTHOR

...view details