ಕರ್ನಾಟಕ

karnataka

ಹೆಪಟೈಟಿಸ್ ಖಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ರೋಗ ಲಕ್ಷಣಗಳು, ಚಿಕಿತ್ಸೆಯ ವಿವರ..

By

Published : Jul 28, 2021, 7:13 PM IST

2010ರಿಂದ ವಿಶ್ವ ಆರೋಗ್ಯ ಸಂಸ್ಥೆ(WHO) ವಿಶ್ವ ಹೆಪಟೈಟಿಸ್ ದಿನವನ್ನು ಆಚರಣೆ ಮಾಡುತ್ತಾ ಬಂದಿದೆ. ನಮ್ಮ ದೇಶದಲ್ಲಿ ಶೇ.4ರಷ್ಟು ಜನ ಈ ರೋಗದಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯ ಡಾ.ಪ್ರಸನ್ನ ಕೆ.ಎಸ್ ಅವರು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ವಿಶ್ವ ಹೆಪಟೈಟಿಸ್ ದಿನಾಚರಣೆ
World Hepatitis Day

ಬೆಂಗಳೂರು:ಇಂದು ಜುಲೈ 28. ವಿಶ್ವ ಹೆಪಟೈಟಿಸ್ ದಿನಾಚರಣೆ. 2010ರಿಂದ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನವನ್ನು ಆಚರಣೆ ಮಾಡುತ್ತಾ ಬಂದಿದೆ. ನಮ್ಮ ದೇಶದಲ್ಲಿ ಸದ್ಯ ಶೇ 4ರಷ್ಟು ಜನ ಈ ರೋಗದಿಂದ ಬಳಲುತ್ತಿದ್ದಾರೆ.

ಫೋರ್ಟಿಸ್ ಆಸ್ಪತ್ರೆ ವೈದ್ಯ ಡಾ.ಪ್ರಸನ್ನ ಕೆ.ಎಸ್

ಯಕೃತ್‌ನಲ್ಲಿ (ಲಿವರ್) ಉರಿಯೂತ ಉಂಟುಮಾಡುವ ಲಕ್ಷಣಗಳನ್ನೊಳಗೊಂಡ ಈ ರೋಗವನ್ನು ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಹೆಪಟೈಟಿಸ್‌ ರೋಗವು ಹೆಪಟೈಟಿಸ್ ಎ, ಬಿಬಿ, ಸಿ ಮತ್ತು ಇ ಎಂದು ಗುರುತಿಸುವ ವೈರಸ್‌ನಿಂದ ಹರಡುತ್ತದೆ.

ಹೆಪಟೈಟಿಸ್ ಹರಡುವ ಬಗೆ ಹೇಗೆ?

ಪಿತ್ತಜನಕಾಂಗವು ಮನುಷ್ಯನ ದೇಹದ ಮುಖ್ಯ ಅಂಗ. ಇದು ಕಾರ್ಬೋಹೈಡ್ರೆಟ್ಸ್ ಪ್ರೊಟಿನ್‌ಗಳನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತದೆ. ಹೆಪಟೈಟಿಸ್ ಎ ಮತ್ತು ಇ ವೈರಸ್‌ಗಳು ಕಲುಶಿತ ನೀರು ಕುಡಿಯುವುದು, ಸ್ವಚ್ಛವಿರದ ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ಬರುತ್ತದೆ. ಈ ವೈರಸ್ ಹೆಚ್ಚಾಗಿ ಹಿಂದುಳಿದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳು ಸೋಂಕು ಈಗಾಗಲೇ ತಗುಲಿರುವ ವ್ಯಕ್ತಿಯ ರಕ್ತದ ಮೂಲಕ ಬರುವ ಸಾಧ್ಯತೆ ಹೆಚ್ಚು. ಬಳಸಿದ ಇಂಜೆಕ್ಷನ್, ರಕ್ತ ದಾನದ ವೇಳೆ ಎಚ್ಚರಿಕೆ ವಹಿಸದೆ ಇದ್ದರೆ ಹೆಪಟೈಟಿಸ್ ಬಿ ಬರುವ ಸಂಭವವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಕ್ತ ದಾನದ ವೇಳೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಈ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ. ಇನ್ನು ಹೆಪಟೈಟಿಸ್ ಸಿ ಹೆಚ್ಚು ಕುಡಿತ ಹಾಗೂ ಡ್ರಗ್ಸ್ ಸೇವನೆಯಿಂದ ಬರಲಿದೆ. ಹೀಗಾಗಿ ಈ ವೈರಸ್ ಮುಂದುವರೆದ ದೇಶಗಳಲ್ಲಿ ಕಂಡು ಬರುತ್ತವೆ ಎಂದು ಡಾ.ಪ್ರಸನ್ನ ಹೇಳುತ್ತಾರೆ.

ಹೆಪಟೈಟಿಸ್ ಎ ಮತ್ತು ಇ ವೈರಸ್‌ನಿಂದ ಸಾವು

ಈ ಎರಡು ವೈರಸ್‌ಗಳು ಹೆಚ್ಚು ಅಪಾಯಕಾರಿ. ಏಕೆಂದರೆ ಈ ವೈರಸ್ ತಗುಲಿದ ವ್ಯಕ್ತಿಯ ಲಿವರ್ ಒಂದೆರಡು ವಾರದಲ್ಲಿಯೇ ವೈಫಲ್ಯ ಆಗುವ ಸಾಧ್ಯತೆ ಇರುವುದರಿಂದ ಸಾವು ಸಂಭವಿಸಬಹುದು. ಹೀಗಾಗಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಸೇವಿಸಬೇಕು. ಇನ್ನು ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳಿಂದ ಶೀಘ್ರವೇ ಸಾವು ಬಾರದಿದ್ದರೂ, ಈ ರೋಗ ಪತ್ತೆಯಾದ ಪ್ರಾರಂಭದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಲಿವರ್ ಫೆಲ್ಯೂರ್ ಆಗುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.

ರೋಗದ ಲಕ್ಷಣಗಳೇನು ?

ಈ ವೈರಸ್ ತಗುಲಿದ ವ್ಯಕ್ತಿಯಲ್ಲಿ ಆಯಾಸ, ಕೀಲು ನೋವು, ಸಣ್ಣಗೆ ಜ್ವರ, ತಲೆ ಸುತ್ತುವಿಕೆ, ವಾಂತಿ, ಹಸಿವಾಗದೆ ಇರುವುದು, ಹೊಟ್ಟೆ ನೋವು ಹಾಗೂ ಚರ್ಮ ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಚಿಕಿತ್ಸೆ ಏನು?

ಹೆಪಟೈಟಿಸ್ ಬಿ ಮತ್ತು ಎ ಗೆ ಲಸಿಕೆ ಲಭ್ಯವಿದೆ. ಪ್ರಾರಂಭದಲ್ಲೇ ಲಸಿಕೆ ಹಾಕಿಸಿಕೊಳ್ಳುವುದರಿಂದ ಈ ವೈರಸ್‌ನಿಂದ ರಕ್ಷಣೆ ಪಡೆಯಬಹುದು. ಇನ್ನು ಹೆಪಟೈಟಿಸ್ ಸಿ ಮತ್ತು ಇ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ಸಾಗುತ್ತಿದ್ದು, ಚಿಕಿತ್ಸೆ ಮಾತ್ರ ಲಭ್ಯವಿದೆ. ಈ ಚಿಕಿತ್ಸೆ ದುಬಾರಿ. ಹೀಗಾಗಿ ರೋಗ ತಗುಲುವುದಕ್ಕೂ ಮುನ್ನವೆ ಹೆಪಟೈಟಿಸ್ ಬಗ್ಗೆ ಜಾಗೃತಿ ಹೊಂದಬೇಕು. ಈಗಾಗಲೇ ವಿಶ್ವಾದ್ಯಂತ ಈ ಬಗ್ಗೆ ಪ್ರತಿವರ್ಷ ಜುಲೈ 28ರಂದು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬರೂ ಹೆಪಟೈಟಿಸ್ ವೈರಸ್‌ಗಳ ಬಗ್ಗೆ ತಿಳಿದುಕೊಂಡು ಮುನ್ನೆಚ್ಚರಿಕೆ ಹೊಂದಿರಬೇಕು ಎಂದು ಡಾ.ಪ್ರಸನ್ನ ತಿಳಿಸುತ್ತಾರೆ.

ABOUT THE AUTHOR

...view details