ಬೆಂಗಳೂರು: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳು ಮತ್ತು ನೀವು (CRY- Child Rights and You) ಎಂಬ ಸಂಸ್ಥೆಯು ತನ್ನ ಪಾಲುದಾರ ಸಂಸ್ಥೆಗಳೊಂದಿಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಘೋಷಣೆ ಮಾಡಿದಂತೆ, ಸಮಾಜದಲ್ಲಿ ಅಡಗಿರುವ ಬಾಲ ಕಾರ್ಮಿಕ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹಾಗೂ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸಿಆರ್ವೈ (CRY) ಸಂಸ್ಥೆ ಹೇಳಿದೆ.
ಕರ್ನಾಟಕದ ಐದು ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬೆಳಗಾವಿ, ಕೋಲಾರ ಮತ್ತು ಬೆಂಗಳೂರು ಸೇರಿದಂತೆ, ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಿ.ಆರ್.ವೈ (CRY) ಸಂಸ್ಥೆ ಹಾಗೂ ಅವರ ಸಹ ಪಾಲುದಾರ ಸಂಸ್ಥೆಗಳು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 'ಎಲ್ಲರಿಗೂ ಸಾಮಾಜಿಕ ನ್ಯಾಯ. ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಿ!' ಎಂಬ ಘೋಷಣೆಯೊಂದಿಗೆ 2023ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಮಗು ಸುರಕ್ಷಿತವಾಗಿರುವಂತೆ ಮತ್ತು ಮಕ್ಕಳ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎಲ್ಲ ಕಚೇರಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಅನುಷ್ಠಾನ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ದಿನದ ಅಂಗವಾಗಿ ಪೂರ್ವಭಾವಿಯಾಗಿ ಶಾಲಾ-ಕಾಲೇಜುಗಳ ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತಂತೆ ಚಿತ್ರಕಲಾ, ಪ್ರಬಂದ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಬೇಕು. ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಆಡಳಿತದ ಸಹಯೋಗದೊಂದಿಗೆ ಪ್ರತಿಯೊಂದು ಮಗು ಶಾಲೆಗೆ ಹೋಗುವ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಅರಿವು ಮೂಡಿಸಬೇಕು. ಎಲ್ಲ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಯವರು, ಬಾಲ ಕಾರ್ಮಿಕ ಮಕ್ಕಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಿಆರ್ವೈ (CRY) ಸಂಸ್ಥೆ ತನ್ನ ಪಾಲುದಾರ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ.
ಆತಂಕದ ಸನ್ನಿವೇಶ:ಬಾಲಕಾರ್ಮಿಕ ಪದ್ಧತಿ ಜಗತ್ತಿನ ಪಿಡುಗು. ಇಂದು ಎಲ್ಲೆಡೆ ಹಬ್ಬಿದೆ. ಇದನ್ನು ಕೊನೆಗಾಣಿಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. 2020ರ ಪ್ರಕಾರ ಯುನಿಸೆಫ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಉಲ್ಲೇಖ ಮಾಡಿದ ವರದಿಯಂತೆ ಜಾಗತಿಕ ಮಟ್ಟದಲ್ಲಿ ಅಂದಾಜು 16 ಕೋಟಿ ಮಕ್ಕಳು (5 ರಿಂದ 17 ವರ್ಷದೊಳಗಿನವರು) ಬಾಲ ಕಾರ್ಮಿಕರಾಗಿದ್ದರು. ಅದರಲ್ಲಿ 6.3 ಕೋಟಿ ಹುಡುಗಿಯರು ಮತ್ತು 9.7 ಕೋಟಿ ಹುಡುಗರು ಬಾಲ ಕಾರ್ಮಿಕರಾಗಿ ಉಳಿದಿದ್ದಾರೆ. ಜಗತ್ತಿನಾದ್ಯಂತ ಬಹುತೇಕ 10 ಮಕ್ಕಳಲ್ಲಿ 1 ಮಗು (1 In 10) ಈ ಸಮಸ್ಯೆಗೆ ಒಳಗಾಗುತ್ತದೆ ಎಂದು ಅಂದಾಜಿಸಲಾಗಿದೆ. ಶೇ. 50 ರಷ್ಟು ಮಕ್ಕಳು ಆರೋಗ್ಯ ದೃಷ್ಟಿಯಿಂದ, ಸುರಕ್ಷತೆ ಮತ್ತು ನೈತಿಕ ಅಭಿವೃದ್ಧಿಗೆ ನೇರವಾಗಿ ಅಪಾಯವನ್ನುಂಟು ಮಾಡುವ ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬ ಮಾತುಗಳನ್ನು ಸಹ ವರದಿಯಲ್ಲಿ ಉಲ್ಲೇಖ ಮಾಡಿದೆ.