ಬೆಂಗಳೂರು: ಬೆಂಗಳೂರಿನ ಅತ್ಯಂತ ಹಳೆಯ ರೈಲು ನಿಲ್ದಾಣ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ವಿಶ್ವದರ್ಜೆಯ ಸ್ಪರ್ಶ ಸಿಗಲಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಸಂಪೂರ್ಣ ಹೊಸ ರೂಪ ಸಿಗಲಿದೆ.
ಮೊದಲ ಹಂತದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಯಾರ್ಡ್ ಅನ್ನು 45 ಕೋಟಿ ರೂ. ವೆಚ್ಚದಲ್ಲಿ ಮರು ವಿನ್ಯಾಸಗೊಳಿಸಲಾಗುವುದು. ಆ ಮೂಲಕ ನಾಲ್ಕು ಹೆಚ್ಚುವರಿ ಪ್ಲಾಟ್ಫಾರ್ಮ್ ಹಾಗೂ ಎರಡು ಹೆಚ್ಚುವರಿ ಹಳಿಗಳನ್ನು ನಿರ್ಮಿಸಲಾಗುವುದು. ಇದರಿಂದ ಹೆಚ್ಚಿನ ರೈಲುಗಳು ಈ ನಿಲ್ದಾಣದ ಮೂಲಕ ಕಾರ್ಯನಿರ್ವಹಿಸಲಿದೆ. ಈ ಯಾರ್ಡ್ ಬೆಂಗಳೂರು ಉಪನಗರ ರೈಲು ಜಾಲದ ಜೊತೆ ಸಂಯೋಜಿಸಲ್ಪಡಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೋರ್ ಬ್ಯಾಂಕ್ ರಸ್ತೆ ಹಾಗೂ ನೇತಾಜಿ ರಸ್ತೆ ಮಧ್ಯೆ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮರುವಿನ್ಯಾಸ ಕಾಮಗಾರಿ 2023ರ ಫೆಬ್ರವರಿ ಒಳಗೆ ಪೂರ್ಣಗೊಳ್ಳಲಿದೆ.
ಎರಡನೇ ಹಂತದಲ್ಲಿ ನಿಲ್ದಾಣವನ್ನು ವಿಶ್ವದರ್ಜೆಯ ವಿಮಾನ ನಿಲ್ದಾಣ ವಿನ್ಯಾಸದಲ್ಲಿ 480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಹೊಸ ನಿಲ್ದಾಣದಲ್ಲಿ ಸಂಪೂರ್ಣ ಹವಾನಿಯಂತ್ರಿತ 216 ಮೀ. ಅಗಲದ ಸಭಾಂಗಣ, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು, ಜಿ+5 ಬಹುಮಹಡಿ ಪಾರ್ಕಿಂಗ್, ವಾಣಿಜ್ಯ ಚಟುವಟಿಕೆಗಳಿಗೆ ಸ್ಥಳಾವಕಾಶದೊಂದಿಗೆ ಪ್ಲಾಟ್ ಫಾರ್ಮ್ ಮೇಲೆ ರೂಫ್ ಪ್ಲಾಜಾ ನಿರ್ಮಾಣ ಮಾಡಲಾಗುವುದು.
ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ನೀಲನಕ್ಷೆ ಮಳೆ ನೀರು ಕೊಯ್ಲು ವ್ಯವಸ್ಥೆಯೊಂದಿಗೆ ಹಸಿರು ಕಟ್ಟಡ, ಎಲ್ಇಡಿ ಲೈಟಿಂಗ್ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಮಾಡಲಾಗುವುದು. ವೈ-ಫೈ ವ್ಯವಸ್ಥೆ, ದಿವ್ಯಾಂಗ ಸ್ನೇಹಿ ನಿಲ್ದಾಣ, ರ‍್ಯಾಂಪ್, ಲಿಫ್ಟ್ಸ್, ಸಬ್ ವೇ ಗಳ ನಿರ್ಮಾಣ, ಸ್ಥಳೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಜೊತೆ ಬಹು ಮಾದರಿ ಸಂಯೋಜನೆ ಇರಲಿದೆ.
ಈ ಹೊಸ ವಿನ್ಯಾಸದ ರೈಲು ನಿಲ್ದಾಣ ಕಟ್ಟಡ ಪ್ರಸಕ್ತ ಇರುವ ಪಾರಂಪರಿಕ ಅಂಶಗಳನ್ನು ಕಾಪಾಡಲಿದ್ದು, ಬೆಂಗಳೂರಿನ ಸ್ಪೂರ್ತಿಯನ್ನು ಒಳಗೊಂಡಿರಲಿದೆ. ಈ ಕಟ್ಟಡದ ಛಾವಣಿ ಅಲೆಗಳ ರಚನೆಯಲ್ಲಿ ಇರಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿರಲಿದೆ. ಛಾವಣಿಯ ಪಿಲ್ಲರ್ಗಳು ಜೋಡುವಲ್ಲಿ ಹೂವಿನ ಆಕೃತಿಯನ್ನು ರಚಿಸಲಾಗುವುದು. ಆ ಮೂಲಕ ಬೆಂಗಳೂರು ಉದ್ಯಾನ ನಗರಿಯ ವಿಶೇಷತೆಯನ್ನು ಪ್ರತಿಬಿಂಬಿಸಲಾಗುವುದು. ವಿವಿಧ ಪಿಲ್ಲರ್ಗಳನ್ನು ಅಡ್ಡಲಾಗಿ ಸಂಪರ್ಕಿಸುವ ಬೀಮ್ಗಳು ಕೊಳಲು ವಿನ್ಯಾಸದಲ್ಲಿರಲಿವೆ.
ಈ ಯೋಜನೆಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ದಿಲ್ಲಿ ಮೂಲದ ವರಿಂದೆರ ಕಟ್ಟಡ ನಿರ್ಮಾಣ ಖಾಸಗಿ ಸಂಸ್ಥೆಗೆ ಕಾಮಗಾರಿ ಟೆಂಡರ್ ನೀಡಲಾಗಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಎದುರಿನ ರಸ್ತೆಯನ್ನು ಸ್ಥಳಾಂತರಿಸಿ, ಅಗಲೀಕರಣ ಮಾಡಲಾಗುವುದು.
ಇದನ್ನೂ ಓದಿ:ಹುಬ್ಬಳ್ಳಿ ಏರ್‌ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ