ಬೆಂಗಳೂರು:ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಮೂರನೇ ದಿನವಾದ ಇಂದು ವಿಜ್ಞಾನ ಸಂಚಾರಕ ಸಮ್ಮೇಳನ ಹಾಗೂ ಮಹಿಳಾ ವಿಜ್ಞಾನ ಕಾಂಗ್ರೆಸ್ ಸಮಾವೇಶ ಚಾಲನೆ ಪಡೆಯಲಿದೆ.
ಮಹಿಳಾ ವಿಜ್ಞಾನ ಕಾಂಗ್ರೆಸ್ ಹಾಗೂ ವಿಜ್ಞಾನ ಸಂಚಾರಕ ಸಮ್ಮೇಳನ ಇಂದು ಬೆಳಗ್ಗೆ 11.30ಕ್ಕೆ ಆರಂಭವಾಗುವ ವಿಜ್ಞಾನ ಸಂಚಾರಕ ಸಮ್ಮೇಳನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಕೋಲ್ಕತ್ತಾದ ಐಎಸ್ಸಿಎ ಪ್ರಧಾನ ಕಾರ್ಯದರ್ಶಿ ಅನುಪ್ ಕುಮಾರ್ ಜೈನ್, ಅಖಿಲೇಶ್ ಗುಪ್ತ, ಎಂಸಿ ವೇಣುಗೋಪಾಲ್, ರಾಜೇಂದ್ರ ಕುಮಾರ್ ಕಟಾರಿಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1:30 ಕ್ಕೆ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮುದಾಯ ಭವನದಲ್ಲಿ ಎರಡು ದಿನಗಳ ಮಹಿಳಾ ವಿಜ್ಞಾನ ಕಾಂಗ್ರೆಸ್ ಚಾಲನೆ ಪಡೆಯಲಿದೆ. ಯುಎಎಸ್ ಉಪಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಡಿಆರ್ ಡಿಓ ಏರೋನಾಟಿಕಲ್ ಸಿಸ್ಟಮ್ ವಿಭಾಗದ ಪ್ರಧಾನ ನಿರ್ದೇಶಕ ಡಾ. ಥೇಸೆ ಥಾಮಸ್, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಮತ್ತಿತರರು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಸ್ತುಪ್ರದರ್ಶನ ಎಂದಿನಂತೆ ಮುಂದುವರಿಯಲಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.