ಬೆಂಗಳೂರು: ಈ ಹಿಂದಿನ ದಿನಮಾನಗಳಲ್ಲಿ ಒಂದಿಷ್ಟು ಕಟ್ಟುಪಾಡುಗಳಿಗೆ ತುತ್ತಾಗಿಯೋ, ಉತ್ತಮವಲ್ಲದ ಆರ್ಥಿಕ ಪರಿಸ್ಥಿತಿಯಿಂದಾಗಿಯೋ ಅದೆಷ್ಟೋ ಮಂದಿ ಶಿಕ್ಷಣದಿಂದ ದೂರ ಉಳಿದಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಹೌದು, ಸಹಜವಾಗಿ ಪರೀಕ್ಷಾ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಒಲವು ತೋರುತ್ತಿರುವ ವಿಚಾರ ಆಶಾದಾಯಕ ಬೆಳವಣಿಗೆ.
ರಾಜ್ಯ ರಾಜಧಾನಿಯಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರ ಪೈಕಿ ನಾರಿಯರದ್ದೇ ಮೇಲುಗೈ. ಹೆಣ್ಣು ಮಗಳ ಕುಟುಂಬಸ್ಥರು ಇದೀಗ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ .ಇದಕ್ಕೆ ಸರ್ಕಾರದ ಹಲವು ಯೋಜನೆಗಳು ಕೂಡ ಕಾರಣವಾಗಿದೆ. ಕೇವಲ ಸಿಟಿ ಯುವತಿಯರಷ್ಟೇ ಅಲ್ಲದೇ ಹಳ್ಳಿಯ ಯುವತಿಯರು ಕೂಡ ಉನ್ನತ ಶಿಕ್ಷಣ ಪಡೆಯುವಲ್ಲಿ ಮುಂದೆ ಇದ್ದಾರೆ.
ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಯುವತಿಯರ ದಾಖಲಾತಿ ಪ್ರಮಾಣದ ಕುರಿತು ಕಾಮೆಡ್ ಕೆ ಕಾರ್ಯದರ್ಶಿ ಡಾ. ಕುಮಾರ್ ಪ್ರತಿಕ್ರಿಯಿಸಿದ್ದು, ಯಾವುದೇ ಮೆಡಿಕಲ್ ಕಾಲೇಜಿನ ಅಂಕಿ ಅಂಶ ತೆಗೆದುಕೊಂಡರೂ ಅದರಲ್ಲಿ ಶೇ 60 ರಷ್ಟು ದಾಖಲಾತಿ ಯುವತಿಯರದ್ದು ಇದ್ದರೆ ಶೇ 40 ರಷ್ಟು ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಯುವಕರ ದಾಖಲಾತಿ ಪ್ರಮಾಣವಿದೆ. ದಂತ ವೈದ್ಯಕೀಯ ಶಿಕ್ಷಣಕ್ಕೆ ಹೋದರೆ ಅಲ್ಲಿಯೂ ಶೇ 70 ರಷ್ಟು ಹೆಣ್ಮಕ್ಕಳೇ ಇರುತ್ತಾರೆ. ಆದರೆ ಇಂಜಿನಿಯರಿಂಗ್ನಲ್ಲಿ ಈ ಮಟ್ಟದ ಭಾಗವಹಿಸುವಿಕೆ ಇಲ್ಲ. 1980-90ರ ಸಮಯದಲ್ಲಿ ಶೇ 10ರಷ್ಟು ವಿದ್ಯಾರ್ಥಿನಿಯರು ಮಾತ್ರ ಶಿಕ್ಷಣ ಪಡೆಯುತ್ತಿದ್ದರು, ಆದರೀಗ ಯುವತಿಯರೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ವೇದಿಕೆಯ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದು, ಸರ್ಕಾರವು ಶಿಕ್ಷಣದ ನೀತಿಯನ್ನು ಬದಲಾಯಿಸಿಕೊಂಡು ಬರುವುದರ ಜತೆಗೆ ಹಲವು ಸವಲತ್ತುಗಳನ್ನು ಹೆಣ್ಮಕ್ಕಳ ಶಿಕ್ಷಣಕ್ಕಾಗಿಯೇ ನೀಡುತ್ತಿದೆ. ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಪೆಲ್ ಸೌಲಭ್ಯ ನೀಡುತ್ತಿದೆ. ಹಾಗೆಯೇ ಉನ್ನತ ಶಿಕ್ಷಣವನ್ನು ಪೂರೈಸಿದರೆ ಎಲ್ಲಿ ಬೇಕಾದರೂ ಉದ್ಯೋಗ ಸಿಗುವ ನಿರೀಕ್ಷೆ ಇದ್ದು, ಕುಟುಂಬದ ಸದಸ್ಯರು ಕೂಡ ಬೆಂಬಲ ನೀಡುತ್ತಿದ್ದಾರೆ. ಶೇ 50 ರಷ್ಟು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ ಯುವತಿಯರೇ ಹೆಚ್ಚು ಇದ್ದಾರೆ. ಕೃಷಿ ಶಿಕ್ಷಣದಲ್ಲೂ ಯುವತಿಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.