ಬೆಂಗಳೂರು :ಶಕ್ತಿ ಯೋಜನೆಯಡಿ ಮಹಿಳೆಯರು ಒಂದೇ ಬಾರಿ ತೆರಳುವುದು ಬೇಡ. ಇದರಿಂದ ಇತರ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಈ ಸಂಬಂಧ 15 ದಿನ ನೋಡಿ, ಬಳಿಕ ಕೆಲವು ಬದಲಾವಣೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಜೂನ್ 11 ರಂದು 5 ಲಕ್ಷ 70 ಸಾವಿರ ಜನ ಓಡಾಡಿದ್ರು. ನಂತರ 40 ಲಕ್ಷ ಜನ, ಆಮೇಲೆ 3 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆದರೆ ಒಮ್ಮೆಲೆ ಹೋಗೋದು ಬೇಡ ಅಂತ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ದೇವಸ್ಥಾನಕ್ಕೆ ಹೋಗಲು ಒಂದೇ ಸಲ ತೆರಳಿ ಬಸ್ ರಷ್ ಹೆಚ್ಚಾಗಿದೆ. ಈ ಕಾರ್ಯಕ್ರಮ ಐದು ವರ್ಷ ಇರಲಿದೆ. ಒಂದೇ ಬಾರಿಗೆ ಹೋಗಬೇಡಿ. ಆತಂಕಪಡುವ ಅಗತ್ಯ ಇಲ್ಲ. ಮತ್ತೆ ಚುನಾವಣೆ ನಡೆದ ಬಳಿಕ ಇನ್ನೂ 10 ವರ್ಷ ಕಾರ್ಯಕ್ರಮ ಇರಲಿದೆ. ಕೆಲ ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇರಲಿದೆ. ಒಂದೇ ದಿನದ ಬದಲಾಗಿ ಬೇರೆ ಬೇರೆ ದಿನ ಪ್ರಯಾಣ ಮಾಡಿ. ಹೆಚ್ಚು ಒತ್ತಡ ಇರಬಾರದು. ಇದರಿಂದ ವಿದ್ಯಾರ್ಥಿಗಳು, ಇತರರಿಗೆ ಸಮಸ್ಯೆ ಆಗುತ್ತದೆ ಎಂದು ಮನವಿ ಮಾಡಿದರು.
ವಾರದಲ್ಲಿ 70 ಕೋಟಿ ರೂ ಮೌಲ್ಯದ ಉಚಿತ ಟಿಕೆಟ್ ಪ್ರಯಾಣವಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಾರಂಭದಲ್ಲಿ ಈ ರೀತಿಯ ರಷ್ ಇರುತ್ತೆ. ಒಂದೇ ದಿನ ಧರ್ಮ ಕ್ಷೇತ್ರಕ್ಕೆ ಹೋಗ್ತಾರೆ. ಪ್ರತಿದಿನ ಹೋಗಲ್ಲ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಪ್ರಯಾಣ ಮಾಡಿದ್ದಾರೆ. ಇನ್ಮೇಲೆ ಆರು ತಿಂಗಳ ನಂತರ ಪ್ರಯಾಣ ಮಾಡ್ತಾರೆ. ಜನರಿಗೆ ಬೇರೆ ಪ್ರಯಾಣಕರಿಗೆ ತೊಂದರೆ ಆಗಬಾರದು. ಎಷ್ಟು ಬಸ್ ಇದೆಯೋ ಅಷ್ಟೇ ಬಸ್ ಹೋಗ್ತಿದೆ ಎಂದರು.
ಖಾಸಗಿ ಬಸ್ಗಳಿಗೆ ನಷ್ಟವಾಗುತ್ತಿರುವ ಬಗ್ಗೆ ಮಾತನಾಡಿ, ಖಾಸಗಿ ಬಸ್ನವರೂ ಟ್ಯಾಕ್ಸ್ ಕಟ್ಟುತ್ತಾರೆ. ಅವರ ಜೀವನವೂ ನಡೆಯಬೇಕು. ಸದ್ಯ ಉತ್ಸಾಹದಲ್ಲಿ ಮಹಿಳೆಯರು ಪ್ರಯಾಣ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಲಿದೆ ನೋಡೋಣ ಎಂದು ಹೇಳಿದರು.
ಬಿಜೆಪಿ ಸಂಸದರದ್ದು ಜೀ ಹುಜೂರ್ ಸಂಸ್ಕೃತಿ: ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗ ರೆಡ್ಡಿ, ಬಿಜೆಪಿಯವರು ಬರೀ ಉತ್ತರಕುಮಾರರು ಅಷ್ಟೇ. ಅವರದ್ದು ಜೀ ಹುಜೂರ್ ಸಂಸ್ಕೃತಿ. ಅವರು ತಿರುಪತಿ ತಿಮ್ಮಪ್ಪನ ಬಳಿ ಹೋಗಿ ದೇವರಿಗೆ ಕೈ ಮುಗಿದು ಬಂದಂತೆ, ಮೋದಿ ಮುಂದೆ ನಿಂತು ಕೈ ಮುಗಿದು ಬರ್ತಾರೆ ಅಷ್ಟೇ. ಅವರಿಗೆ ಮೋದಿ ಮುಂದೆ ನಿಂತು ಮಾತನಾಡುವ ಧಮ್ ತಾಕತ್ ಇಲ್ಲ. ಧಮ್ ಇದ್ದಿದ್ದು ಒಬ್ಬರಿಗೆ ಅದು ಯಡಿಯೂರಪ್ಪ ಅವರಿಗೆ. ಆದರೆ ಅವ್ರರನ್ನು ಇವಾಗ ಮನೆಗೆ ಕಳುಹಿಸಿಬಿಟ್ರು ಎಂದು ವಾಗ್ದಾಳಿ ನಡೆಸಿದರು.