ಬೆಂಗಳೂರು: ನಿರ್ಭಯಾ ಯೋಜನೆಯಡಿ ರಾಜ್ಯ ಸರ್ಕಾರ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಂಪುಟ ಸಭೆಯು 40.92 ಕೋಟಿ ರೂ.ಅನುದಾನದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅನುಮೋದನೆ ನೀಡಿದೆ. ನಿರ್ಭಯಾ ಯೋಜನೆಯಡಿ ಸರ್ಕಾರ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಜಾರಿಗೊಳಿಸಲಿರುವ ಕಾರ್ಯಯೋಜನೆಯ ವರದಿ ಇಲ್ಲಿದೆ.
ಕೇಂದ್ರ ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ವಿವಿಧ ಕಾರ್ಯಕ್ರಗಳನ್ನು ಜಾರಿಗೆ ತರುತ್ತಿದೆ. 60:40 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಭಯಾ ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಡಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ನಿರ್ಭಯಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಬಿಎಂಟಿಸಿಗೆ 50.07 ಕೋಟಿ ರೂ. ವೆಚ್ಚದ ಕಾರ್ಯಯೋಜನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿದೆ.
ಈ ಸಂಬಂಧ ಕೇಂದ್ರ ಸರ್ಕಾರ ತನ್ನ ಪಾಲಿನ 33.64 ಕೋಟಿ ರೂ ಬಿಡುಗಡೆ ಮಾಡಿದ್ದರೆ, 22.43 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ 40.92 ಕೋಟಿ ವೆಚ್ಚದಲ್ಲಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಯನ್ನು ಹೊಂದಿರುವ ಮೊಬೈಲ್ ಆಪ್, ಇನ್-ಬಸ್ ಕಣ್ಣಾವಲು ವ್ಯವಸ್ಥೆ ಮತ್ತು ಬಸ್ ನಿಲುಗಡೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್) ಪ್ರದರ್ಶಕಗಳನ್ನು ಅನುಷ್ಠಾನಗೊಳಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮಾರ್ಚ್ 2021ರೊಳಗೆ ಈ ಸುರಕ್ಷತಾ ಕ್ರಮಗಳ ಜಾರಿಗೊಳಿಸಲು ಯೋಜಿಸಲಾಗಿದೆ.
ಬಿಎಂಟಿಸಿಗೆ 'ನಿರ್ಭಯಾ' ಟಚ್ ಹೇಗಿರಲಿದೆ?:
ನಿರ್ಭಯಾ ಯೋಜನೆಯಡಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಬಿಎಂಟಿಸಿಯ ಸುಮಾರು 27,000 ಸಿಬ್ಬಂದಿಗೆ ಲಿಂಗ ಸಂವೇದನೆಯ ತರಬೇತಿ ನೀಡಲಾಗುತ್ತದೆ. ಜೊತೆಗೆ ಬಿಎಂಟಿಸಿಯ 3000 ಮಹಿಳಾ ಸಿಬ್ಬಂದಿಗೆ ತಮ್ಮ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ ನೀಡಲಾಗುತ್ತದೆ. ಲಘು ಮೋಟಾರು ವಾಹನ ಪರವಾನಿಗೆ ಪಡೆಯಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 10 ಕಾರು ಜೀಪುಗಳನ್ನು ಖರೀದಿಸಲಾಗುತ್ತದೆ.