ಬೆಂಗಳೂರು: ಮಹಿಳಾ ಮೀಸಲಾತಿ ನಮ್ಮ ಕನಸು, ರಾಜೀವ್ ಗಾಂಧಿ ತಂದಿದ್ದು ಎನ್ನುವುದನ್ನು ನಿಲ್ಲಿಸಿ, ನಿಮ್ಮ ಪ್ರಯತ್ನ ಒಪ್ಪುತ್ತೇನೆ. ಆದರೆ ತಾಕತ್ತು ಪ್ರದರ್ಶನ ಮಾಡಿ ಇದನ್ನು ಜಾರಿ ಮಾಡಿದ ಶ್ರೇಯಸ್ಸು ಪ್ರಧಾನಮಂತ್ರಿ ಮೋದಿಗೆ ಸಲ್ಲಲಿದೆ. ನೀವು ಈವರೆಗೆ ತಂದಿರುವ ಎಲ್ಲ ಯೋಜನೆ ಶಾಶ್ವತವಲ್ಲ. ಆದರೆ ಮಹಿಳಾ ಮೀಸಲಾತಿ ದೇಶ ಇರುವವರೆಗೂ ಪ್ರಜಾಪ್ರಭುತ್ವ ಇರುವವರೆಗೂ ಶಾಶ್ವತವಾಗಿರಲಿದೆ ಎಂದು ಕ್ರೆಡಿಟ್ ವಾರ್ನಲ್ಲಿ ತೊಡಗಿರುವ ಕಾಂಗ್ರೆಸ್ಗೆ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮಹಿಳಾ ಮೋರ್ಚಾವೂ ಮಹಿಳಾ ಮೀಸಲಾತಿ ಬಿಲ್ ಮಂಡನೆ ಬೆಂಬಲಿಸಿ ಸಂಭ್ರಮಾಚರಣೆ ನಡೆಸಿತು. ಮಹಿಳಾ ಕಾರ್ಯಕರ್ತರು ಮೋದಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಸಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಭಾರತಿ ಶೆಟ್ಟಿ, ದೇಶದಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಬರಬೇಕು. ತ್ರಿವಳಿ ತಲಾಕ್ ರದ್ದಾಗಬೇಕು. ಸಮಾನ ನಾಗರಿಕ ಸಂಹಿತೆ ಬರಬೇಕು ಎಂದು ಎರಡು ಸಮಿತಿಗಳು ವರದಿ ನೀಡಿದ್ದವು. 1996ರಲ್ಲಿ ಪ್ರಧಾನಿ ಆಗಿದ್ದ ಹೆಚ್ ಡಿ ದೇವೇಗೌಡರು ಈ ಮಸೂದೆಯನ್ನು ಲೋಕಸಭೆಯಲ್ಲಿ ತರುತ್ತಾರೆ. ಆದರೆ ತದನಂತರ ಬಂದ ಎಲ್ಲಾ ರಾಜಕೀಯ ಪಕ್ಷಗಳು ಇವತ್ತಿನವರೆಗೂ ಜಾರಿಗೊಳಿಸಲಿಲ್ಲ. ಮೂರು ಬಾರಿ ಮಸೂದೆ ಮಂಡನೆಯಾಗುತ್ತದೆ. ಆದರೆ ಅನುಮೋದನೆಯಾಗಲಿಲ್ಲ. ಮಸೂದೆ ಬಿದ್ದು ಹೋಗುತ್ತದೆ, ಇಲ್ಲವೇ ಸೆಲೆಕ್ಟ್ ಕಮಿಟಿಗೆ ಹೋಗಲಿದೆ. ಈ ರೀತಿ ಕಳ್ಳಾಟವನ್ನು ಎಲ್ಲರೂ ಮಾಡುವುದನ್ನು ನಾವು ನೋಡಿದ್ದೇವೆ ಎಂದರು.
ಮಹಿಳೆಯರ ಕನಸು ನನಸು ಮಾಡಿದ ಮೋದಿ: ವಾಜಪೇಯಿ ಪ್ರಧಾನಿಯಾದ ಸಂದರ್ಭದಲ್ಲಿ ಇದು ಜಾರಿಯಾಗಲಿದೆ ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಇತ್ತು. ಅಂದು ಸೋನಿಯಾ ಗಾಂಧಿ ಮನಸ್ಸು ಮಾಡಿದ್ದರೆ ಆ ಮಸೂದೆ ಅಂದೇ ಜಾರಿಯಾಗುತ್ತಿತ್ತು. ಆದರೆ ಇಂದು ಎಲ್ಲಾ ಪರಿಹಾರವಾಗಿದೆ. ನರೇಂದ್ರ ಮೋದಿಯವರು ಎಲ್ಲ ಮಹಿಳೆಯರ ಕನಸನ್ನು ನನಸು ಮಾಡಿದ್ದಾರೆ, ಕನಸು ಕಾಣಲು ದುಡ್ಡು ಕೊಡಬೇಕಿಲ್ಲ ಕನಸು ಕಾಣಲು ಶ್ರಮ ಪಡಬೇಕಿಲ್ಲ. ಆದರೆ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು ಕನಸನ್ನು ನನಸು ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಹಾಗಾಗಿ ಇಂದು ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಸಿಗುವ ವ್ಯವಸ್ಥೆ ಆಗಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ಕ್ಕೆ ಮಹಿಳಾ ಮೀಸಲಾತಿ ತಂದವರು ಬಿಎಸ್ವೈ: ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರನ್ನು ಕೂಡ ನಾನು ನೆನಪು ಮಾಡಿಕೊಳ್ಳುತ್ತೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿಯನ್ನು ತಂದವರು ಅವರು. ಅದೇ ರೀತಿ ಸ್ಥಳೀಯ ಸಂಸ್ಥೆಯಲ್ಲಿ ಶೇಕಡ 33 ರಷ್ಟು ಇದ್ದ ಮಹಿಳಾ ಮೀಸಲಾತಿಯನ್ನು ಶೇಕಡ 50ಕ್ಕೆ ತಂದವರು ಯಡಿಯೂರಪ್ಪನವರು. ಹಾಗಾಗಿ ಅವರನ್ನು ನಾನು ಸ್ಮರಿಸುತ್ತೇನೆ ಎಂದರು.