ಬೆಂಗಳೂರು:ಚುನಾವಣೆ ಅಖಾಡ ದಿನಗಳೆದಂತೆ ಕಾವೇರುತ್ತಿದೆ. ಬಿಸಿಲಿನ ಪ್ರಖರದಷ್ಟೇ ಪ್ರಚಾರದ ಬಿರುಸು ಕೂಡ ಜೋರಾಗಿದೆ. ಅಖಾಡದಲ್ಲಿ ಮಹಿಳಾ ಅಭ್ಯರ್ಥಿಗಳು ಗಣನೀಯ ಪ್ರಮಾಣದಲ್ಲಿ ರಣಕಣಕ್ಕೆ ಇಳಿದಿದ್ದಾರೆ. ಆದರೆ ಮಹಿಳಾಮಣಿಗಳು ಚುನಾವಣಾ ಅಖಾಡದಲ್ಲಿ ಶಕ್ತಿ ಪ್ರದರ್ಶನ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.
ಕರ್ನಾಟಕದ ಕುರುಕ್ಷೇತ್ರದಲ್ಲಿ ಸಮರೋತ್ಸಾಹ ಇಮ್ಮಡಿಯಾಗಿದೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮತಪ್ರಭುಗಳ ಮನಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಈ ಬಾರಿ ಚುನಾವಣಾ ಅಖಾಡದಲ್ಲಿ 2,613 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ 184 ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಪಕ್ಷಗಳು ಬೆರಳೆಣಿಕೆಯಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಆದರೆ ಪಕ್ಷೇತರ ಅಭ್ಯರ್ಥಿಗಳಾಗಿ ನೂರಾರು ಮಹಿಳಾ ಅಭ್ಯರ್ಥಿಗಳು ರಣಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಪ್ರತಿ ಬಾರಿಯ ಚುನಾವಣಾ ಅಖಾಡದಲ್ಲಿ ಮಹಿಳಾ ಅಭ್ಯರ್ಥಿಗಳು ನೂರಾರು ಸಂಖ್ಯೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ಚುನಾವಣಾ ಶಕ್ತಿ ಪ್ರದರ್ಶನ ಮಾತ್ರ ಕಳಪೆಯಾಗಿರುತ್ತೆ.
2008ರ ರಣಕಣದಲ್ಲಿ ಮಹಿಳಾ ಶಕ್ತಿ: 2008ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 2,242 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ 107 ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ ಗೆಲುವು ಸಾಧಿಸಿದ್ದು ಕೇವಲ ಮೂರು ಮಂದಿ ಮಹಿಳೆಯರು. ಉಳಿದಂತೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗಳು ಹೀನಾಯ ಸೋಲನ್ನು ಕಾಣಬೇಕಾಯಿತು.
2008ರಲ್ಲಿ 107 ಮಹಿಳಾ ಅಭ್ಯರ್ಥಿಗಳಲ್ಲಿ ಸೋತಿರುವ ಅಭ್ಯರ್ಥಿಗಳು ಬರೋಬ್ಬರಿ 104. ಒಟ್ಟು 89 ಮಹಿಳಾ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ. ಅಂದರೆ ಒಟ್ಟು 224 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಕೇವಲ 1.33% ಮಾತ್ರ ಇತ್ತು. 2008ರಲ್ಲಿ ಸ್ಪರ್ಧಿಸಿದ್ದ 107 ಮಹಿಳಾ ಅಭ್ಯರ್ಥಿಗಳ ಪೈಕಿ ಗೆಲುವು ಸಾಧಿಸಿರುವ ಮಹಿಳಾ ಅಭ್ಯರ್ಥಿಗಳು 2.80% ಮಾತ್ರ.