ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯ ಮತ್ತಷ್ಟು ವಿಡಿಯೋಗಳು ಲಭ್ಯವಾಗಿವೆ. ಕಾರಿನ ಬಾನೆಟ್ ಮೇಲೆ ಕುಳಿತಿದ್ದ ದರ್ಶನ್ ಎಂಬಾತನನನ್ನು ಸುಮಾರು ಎರಡು ಕಿ.ಮೀ ದೂರ ಎಳೆದೊಯ್ದ ಬಳಿಕ, ಆತನ ಸ್ನೇಹಿತರು ಚಾಲಕಿ ಪ್ರಿಯಾಂಕಾರ ಕಾರು ಅಡ್ಡಗಟ್ಟಿ ಕಾರಿನ ಗ್ಲಾಸುಗಳನ್ನು ಹೊಡೆದುಹಾಕಿದ್ದರು.
'ಭಯಪಡಿಸಲು ಕಾರು ಚಲಾಯಿಸಿದೆ....'ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪ್ರಿಯಾಂಕಾ ಪೊಲೀಸರಿಗೆ ಕೊಟ್ಟ ಹೇಳಿಕೆ ಹೀಗಿದೆ. ‘‘ಬೆಳಗ್ಗೆ ಆರ್.ಎಂ.ವಿ ಲೇಔಟ್ನಿಂದ ಹೊರಟಿದ್ದ ಪ್ರಿಯಾಂಕಾ ಮತ್ತು ಆಕೆಯ ಪತಿ ಪ್ರಮೋದ್, ಉಲ್ಲಾಳ ಜಂಕ್ಷನ್ ಸಿಗ್ನಲ್ ಬಳಿ ಬಂದಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ದರ್ಶನ್ ಎಂಬವರ ಸ್ವಿಫ್ಟ್ ಕಾರು ಅಡ್ಡಲಾಗಿ ದಾರಿ ಬಿಡದೇ ನಿಂತಿತ್ತು. ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಡದೇ ಮೊಂಡಾಟ ಪ್ರದರ್ಶಿಸಿದ್ದರು. ನಂತರ ನಾವು ಅಲ್ಲಿಂದ ಹೊರಟು ಉಳ್ಳಾಲ ಕಡೆಗೆ ತೆರಳಿದೆವು. ಆದರೆ ದರ್ಶನ್ ಅವರು ನಮ್ಮ ಕಾರನ್ನು ಹಿಂಬಾಲಿಸಿದರು‘‘ ಎಂದು ವಿವರಿಸಿದ್ದಾರೆ.
ಮುಂದುವರಿದು ಹೇಳಿಕೆ ನೀಡಿರುವ ಅವರು ‘‘ಗಾಬರಿಗೊಂಡ ನನ್ನ ಪತಿ 112ಕ್ಕೆ ಕರೆ ಮಾಡಿದರು. ಅಷ್ಟರಲ್ಲಿ ನಮ್ಮನ್ನು ಹಿಂಬಾಲಿಸಿ ಬಂದ ದರ್ಶನ್ ಕಾರಲಿದ್ದವರು ಅಡ್ಡಗಟ್ಟಿ ಗಲಾಟೆ ಮಾಡಿ, ನನ್ನ ಪತಿಯ ಮೇಲೆ ಹಲ್ಲೆ ನಡೆಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಬರುವಂತೆ ಹೇಳಿದರು. ಆದರೆ, ದರ್ಶನ್ ನನ್ನ ಕಾರಿಗೆ ಅಡ್ಡ ಬಂದು ನಿಂತಿದ್ದ. ಆತನಿಗೆ ಭಯಪಡಿಸಲು ನಾನು ಕಾರನ್ನು ಮೂವ್ ಮಾಡಿದ್ದೆ. ಆಗ ಆತ ನನ್ನ ಕಾರಿನ ಬ್ಯಾನೆಟ್ ಮೇಲೆ ಹತ್ತಿ ಕುಳಿತಿದ್ದು ಸ್ವಲ್ಪ ದೂರ ಹೋದ್ರೆ ಇಳಿಯುತ್ತಾನೆ ಅಂತಾ ಮುಂದೆ ಚಲಾಯಿಸಿದ್ದೆ. ಬಳಿಕ ಶಾಂತಿನಿಕೇತನ ಬಳಿ ಕಾರನ್ನು ನಿಲ್ಲಿಸಿದೆ. ಆ ನಂತರದಲ್ಲೂ ಆತನ ಸ್ನೇಹಿತರು ಮತ್ತೆ ನಮ್ಮನ್ನು ಹಿಂಬಾಲಿಸಿದರು. ಕಾಲೇಜೊಂದರ ಬಳಿ ಕಾರು ತಡೆದು, ಏಕಾಏಕಿ ಕಲ್ಲುಗಳಿಂದ ನನ್ನ ಕಾರಿನ ಗ್ಲಾಸ್ ಒಡೆದರು. ಬಳಿಕ ನನ್ನ ಮಾನಕ್ಕೆ ಧಕ್ಕೆ ಆಗುವಂತೆ ವರ್ತಿಸಿದರು' ಎಂದುಕಾರು ಚಾಲಕಿ ಪ್ರಿಯಾಂಕಾ ತಿಳಿಸಿದ್ದಾರೆ.