ಬೆಂಗಳೂರು : ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಅಪರಿಚಿತ ಯುವತಿ ಶವ ಪತ್ತೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ರೈಲ್ವೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡವನ್ನು ರಚಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಂಟೋನ್ಮೆಂಟ್ ರೈಲ್ವೆ ಠಾಣೆಯ ಇನ್ಸ್ಪೆಕ್ಟರ್ ಪ್ರಭಾಕರ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್ಪೆಕ್ಟರ್ ಒಳಗೊಂಡ ಮೂರು ವಿಶೇಷ ತಂಡವನ್ನು ರಚಿಸಲಾಗಿದೆ. ಹಂತಕರ ಸುಳಿವು ದೊರಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರೈಲ್ವೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಂತಕರ ಪತ್ತೆಗೆ ಮೂರು ವಿಶೇಷ ತಂಡ ರಚನೆ: ಅಪರಿಚಿತ ಮಹಿಳೆ ಶವ ಪತ್ತೆ ಸಂಬಂಧ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಬೈಯ್ಯಪ್ಪನಹಳ್ಳಿ, ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್ಪೆಕ್ಟರ್ ಒಳಗೊಂಡ ತಂಡ ರಚಿಸಲಾಗಿದ್ದು ಆರೋಪಿಗಳ ಶೋಧಕಾರ್ಯದಲ್ಲಿ ಕಾರ್ಯಮಗ್ನರಾಗಿದ್ದಾರೆ. ಮೂವರಿಂದ ನಾಲ್ಕು ಮಂದಿ ಆರೋಪಿಗಳು ಆಟೋದಲ್ಲಿ ಬಂದು ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಡ್ರಮ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಚಲನಾವಲನಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳೆಲ್ಲರೂ ಸ್ಥಳೀಯರು ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಆರೋಪಿಗಳ ಇರುವಿಕೆ ಬಗ್ಗೆ ಸುಳಿವು ದೊರೆತಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರೈಲ್ವೇ ಎಸ್ಪಿ ಎಸ್.ಕೆ.ಸೌಮ್ಯಲತಾ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಮೂರನೇ ಪ್ರಕರಣ : ಎರಡು ತಿಂಗಳ ಹಿಂದೆಯಷ್ಟೇ ಅಂದರೆ ಜನವರಿ 4ರಂದು ಯಶವಂತಪುರ ರೈಲು ನಿಲ್ದಾಣದಲ್ಲಿ ನೀಲಿ ಬಣ್ಣದ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ವಿಶಾಖಪಟ್ಟಣದಿಂದ ನಗರಕ್ಕೆ ಬಂದಿದ್ದ ಹಂತಕರು ಡ್ರಮ್ ನಲ್ಲಿ ಶವ ಬಚ್ಚಿಟ್ಟುಕೊಂಡು ರೈಲ್ವೇ ನಿಲ್ದಾಣದಲ್ಲಿ ಇಟ್ಟುಹೋಗಿದ್ದರು. ಕಳೆದ ಡಿಸೆಂಬರ್ 8ರಂದು ಬಂಗಾರಪೇಟೆ -ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನ ಕಾಯ್ದಿರಿಸದ ರೈಲ್ವೆ ಕೋಚ್‌ನಲ್ಲಿ ಇದೇ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.