ಆನೇಕಲ್:ಕೋವಿಡ್-19 ನಿರ್ವಹಣೆಯ ಕುರಿತು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಸಭೆ ಮೇಲಂತಸ್ತಿನಲ್ಲಿ ನಡೆಯುತ್ತಿದ್ದರೆ, ಪತಿಯನ್ನು ಉಳಿಸಿಕೊಡಿ ಎಂದು ಮಹಿಳೆಯೊಬ್ಬರು ಕಣ್ಣೀರಿಡುತ್ತಿದ್ದ ಘಟನೆ ತಾಲೂಕಿನಲ್ಲಿ ನಡೆಯಿತು.
ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆಬ್ಬಗೋಡಿ ಲಕ್ಷ್ಮಣ್ ರ ಪತ್ನಿ ನಾಗರತ್ನ ಎಂಬಾಕೆ ತನ್ನ ಪತಿಯನ್ನು ಉಳಿಸಿಕೊಡಿ ಎಂದು ತಾಲೂಕು ಪಂಚಾಯಿತಿ ಎದುರು ಕಣ್ಣೀರಿಟ್ಟರು. ನಮ್ಮಂಥ ಬಡವರಿಗೆ ಇಂಥ ಪರಿಸ್ಥಿತಿ ಬೇಡ ಎಂದು ಕಣ್ಣೀರಿಟ್ಟ ಮಹಿಳೆ, ತಮ್ಮ ಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರಾಡಲಾಗದೇ ಪರದಾಡುತ್ತಿದ್ದಾರೆ. ಅವರನ್ನು ಉಳಿಸಿಕೊಡಿ ಎಂದು ಅಂಗಲಾಚಿದರು.
ಆನೇಕಲ್ ತಾಲೂಕು ಆಫೀಸ್ ಎದುರು ಕಣ್ಣೀರಿಟ್ಟ ಮಹಿಳೆ ಇದಾದ ನಂತರ ಆಕೆಯ ಕಣ್ಣೀರಿಗೆ ಸ್ಪಂದಿಸಿದ ಶಾಸಕ ಶಿವಣ್ಣ, ಪುರಸಭಾಧ್ಯಕ್ಷ ಪದ್ಮನಾಭ ಮತ್ತು ಜಿಲ್ಲಾಧಿಕಾರಿ ಮಂಜುನಾಥ್ ಕೊನೆಗೆ ಭರವಸೆ ನೀಡಿ ಸಹಕರಿಸಿದರು. ಈ ವೇಳೆ ಸಚಿವರು ಮಾತ್ರ ಸಂಬಂದವಿಲ್ಲದಂತೆ ನೋಡಿಯೂ, ನೋಡದ ಹಾಗೆ ಹೊರಟರು ಎನ್ನಲಾಗಿದೆ.
ಸಚಿವರು ಸಭೆಗಷ್ಟೇ ಸೀಮಿತವಾಗಬಾರದು- ಬಿ ಶಿವಣ್ಣ: ಆನೇಕಲ್ ತಾಲೂಕಿನಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ಸ್ ನಿರ್ವಹಣೆಗೆ ವೈದ್ಯ, ನರ್ಸ್, ತಾಂತ್ರಿಕ ಸಿಬ್ಬಂದಿಯನ್ನು ಕೂಡಲೇ ಒದಗಿಸಿ ಬಡವರನ್ನು ಕಾಪಾಡುವ ಕೆಲಸ ಅತ್ಯಗತ್ಯವಾಗಿ ಆಗಬೇಕು. ಅಲ್ಲದೆ ಖಾಸಗೀ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ಸ್, ಆಮ್ಲಜನಕ ಪೂರೈಕೆಯೊಂದಿಗೆ ಚಿಕಿತ್ಸೆಯನ್ನು ಶೇಕಡ 60ರಷ್ಟು ಮೀಸಲಿಡಲೇಬೇಕು ಎಂದು ಸಚಿವ ಸುರೇಶ್ ಕುಮಾರ್ ಅವರನ್ನು ಕೋರಿದ್ದಾರೆ. ಪ್ರತಿ ಕ್ಷಣ ರೋಗಿಗಳು ಮತ್ತು ಪೋಷಕರು ಆಸ್ಪತ್ರೆಯಲ್ಲಿ ಐಸಿಯು ಲಭ್ಯತೆ ಕುರಿತು ಅಂಗಲಾಚುತ್ತಿದ್ದಾರೆ. ಆದರೆ, ಸಚಿವರು ಖಾಸಗಿ ಆಸ್ಪತ್ರೆಯತ್ತಲೇ ಬೆರಳು ತೋರಿಸುತ್ತಾರೆ. ಹೀಗೆ ಆದರೆ ಬಡವರೇ ನಂಬಿರುವ ಸರ್ಕಾರಿ ಆಸ್ಪತ್ರೆಗಳೇನಾಗಬೇಕು ಎಂದು ಪ್ರಶ್ನಿಸಿದರು.
ರೆಮ್ಡೆಸಿವಿರ್ ಚುಚ್ಚುಮದ್ದು 3,600ರೂ ಬೆಲೆ ಬಾಳುತ್ತದೆ. ಆದರೆ, ಅದು ಸರ್ಕಾರಿ ಆಸ್ಪತ್ರೆಗೆ ಸೀಮಿತವಾಗಿದ್ದು, ಕಾಳಸಂತೆಯಲ್ಲಿ 25-30 ಸಾವಿರಕ್ಕೆ ಬಿಕರಿಯಾಗುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರು. ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸುವುದಷ್ಟೇ ಸಾರ್ವಜನಿಕರ ಕೆಲಸವಾಗಬಾರದು. ಜನರೂ ಒಂದಿಷ್ಟು ತಮಗೆ ತಾವು ಪಾಲನೆಗಳನ್ನ ಅಳವಡಿಸಿಕೊಳ್ಳಬೇಕು. ಮದುವೆಯಂತಹ ಕಾರ್ಯಕ್ರಮಗಳನ್ನು ರದ್ದು ಮಾಡಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸುವ ಮುಖಾಂತರ ಅನಾವಶ್ಯವಾಗಿ ಅಡ್ಡಾಡುವುದನ್ನು ದಯವಿಟ್ಟು ಬಿಡಿ ಎಂದು ಕರೆ ನೀಡಿದರು.
ಓದಿ:ಲಸಿಕೆ ಹಾಕಿಸಿಕೊಳ್ಳದಿದ್ದರೂ ವ್ಯಾಕ್ಸಿನೇಷನ್ ಸಕ್ಸಸ್ ಅಂತಾ ಮೆಸೇಜ್: ಮೈಸೂರಲ್ಲಿ ಮಹಾ ಯಡವಟ್ಟು