ಬೆಂಗಳೂರು :ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿಕೆ ಖಂಡಿಸಿ ಖಾಲಿ ಸಿಡಿ ಪ್ರದರ್ಶಿಸಿ ಮಹಿಳಾ ಕಾಂಗ್ರೆಸ್ ನಾಯಕಿಯರು ಪ್ರತಿಭಟನೆ ನಡೆಸಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ನಾಯಕಿಯರು, ಲಂಚ ಮಂಚ ಸರ್ಕಾರಕ್ಕೆ ಧಿಕ್ಕಾರ, ಸಿಡಿ ಶೂರರಿಗೆ ಧಿಕ್ಕಾರ, 25 ಪರ್ಸೆಂಟ್ ಸರ್ಕಾರಕ್ಕೆ ಧಿಕ್ಕಾರ, ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ರಾಜ್ಯ ಸರ್ಕಾರ ಹಾಗೂ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ : ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತೆಯರ ಬಂಧನ
ಮಹಿಳಾ ಜನ ಪ್ರತಿನಿಧಿಗಳು ಹಾಗೂ ತಾವು ಸೇರಿದಂತೆ 224 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರನ್ನು ಸುಧಾಕರ್ ಅವಮಾನಿಸಿದ್ದಾರೆ. ಸಚಿವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಿಎಂ ಒತ್ತಡ ಹೇರಿಯಾದರೂ, ರಾಜೀನಾಮೆ ಪಡೆಯಬೇಕು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಲೇ ಡಾ.ಸುಧಾಕರ್ ಶಾಸಕತ್ವವನ್ನು ಅನರ್ಹಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಕುಸುಮ ಶಿವಳ್ಳಿ, ಸೌಮ್ಯ ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಚಾರಿತ್ರ್ಯದ ಚಾಲೆಂಜ್ ಹಾಕಿದ್ದ ಸಚಿವ ಸುಧಾಕರ್:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ನಮ್ಮ ಕುಮಾರಣ್ಣ ಹೀಗೆ ಎಲ್ಲರೂ ಸತ್ಯಹರಿಶ್ಚಂದ್ರರಲ್ಲವೇ? ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರೂ ಒಪ್ಪಿಕೊಳ್ಳಲಿ. ಎಲ್ಲ 224 ಶಾಸಕರ ಮೇಲೆ ತನಿಖೆ ನಡೆಯಲಿ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದರು. ಸುಧಾಕರ್ ಹೇಳಿಕೆಗೆ ಸ್ವಪಕ್ಷ ಬಿಜೆಪಿ ನಾಯಕರು ಸೇರಿದಂತೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಚಿವರ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.