ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಗ್ಯಾರಂಟಿ ಮಹಿಳೆಯರು ಬಸ್ದಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಇಂದಿನಿಂದ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ರಸ್ತೆ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಇರಲಿದೆ. ಈ ಯೋಜನೆಯ ವಿಶೇಷತೆ, ಷರತ್ತುಗಳು, ಖರ್ಚು, ವೆಚ್ಚ ಬಗೆಗಿನ ಸಮಗ್ರ ವರದಿ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗಾಗಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ವಿಧಾನಸೌಧ ಗ್ರಾಂಡ್ ಸ್ಟೆಪ್ಸ್ ನಲ್ಲಿ ಇಂದು ಚಾಲನೆ ನೀಡಲಾಯಿತು. ರಾಜ್ಯದ ಮಹಿಳೆಯರು ರಸ್ತೆ ಸಾರಿಗೆ ಬಸ್ ಗಳಲ್ಲಿ ಭಾನುವಾರದಿಂದ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಶಕ್ತಿ ಯೋಜನೆಯ ವಿಶೇಷತೆಗಳೇನು?: ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗಲಿದೆ. ಇದರಿಂದ ನಿತ್ಯ 41.81 ಲಕ್ಷ ಮಹಿಳೆಯರು ಲಾಭ ಪಡೆಯಲಿದ್ದಾರೆ. 11.58 ಲಕ್ಷ ಮಹಿಳಾ ಪಾಸ್ ಪ್ರಯಾಣಿಕರೂ ಇದರ ಲಾಭ ಪಡೆಯಲಿದ್ದಾರೆ.
ಈ ಯೋಜನೆ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯ. ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ. ಆದರೂ ಅಂತಾರಾಜ್ಯ ಮಾರ್ಗಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ಕ್ಲೇವ್ ಮತ್ತು ಸಾಲಿಟರಿ ರೂಟ್ಸ್ ಸಾರಿಗೆಗಳಲ್ಲಿ ರಾಜ್ಯದೊಳಗೆ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸಿಗಲಿದೆ. ಒಂದು ವೇಳೆ ರಾಜ್ಯದಲ್ಲಿನ ಸಂಚಾರದ ವೇಳೆ ಅನ್ಯ ರಾಜ್ಯದ ಗಡಿ ಮುಖಾಂತರ ಹೋಗಬೇಕಾದರೆ 20 ಕಿ.ಮೀ. ವರೆಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.
ರಾಜ್ಯದ 6,308 ನಗರ, 5,958 ಸಾಮಾನ್ಯ ಹಾಗೂ 6,343 ವೇಗದೂತ ಬಸ್ ಸೇರಿ ಒಟ್ಟು 18,609 ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್ ಮಿಷಿನ್) ನಿಂದ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ. ಗುರುತಿನ ಚೀಟಿ ಪರಿಶೀಲನೆ ನಡೆಸಿ ಶೂನ್ಯ ಟಿಕೆಟ್ ವಿತರಿಸಲಾಗುವುದು. ಒಂದು ವೇಳೆ ಇಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಮ್ಯಾನ್ಯುವಲ್ ಆಗಿ ಪಿಂಕ್ ಟಿಕೆಟ್ ವಿತರಿಸಲಾಗುತ್ತದೆ. ಮುಂಗಡ ಬುಕಿಂಗ್ ಸೌಲಭ್ಯವಿರುವ ಬಸ್ಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಹೆಚ್ಚುವರಿ ಬಸ್ ವ್ಯವಸ್ಥೆ: ಈ ವರ್ಷದಲ್ಲಿ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ಸೇರಿ ಒಟ್ಟು 1,894 ಹೊಸ ವಾಹನಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ. ಶಕ್ತಿ ಯೋಜನೆ ಅನುಷ್ಠಾನಗೊಂಡ ಮೇಲೆ ಸಾರ್ವಜನಿಕ ಬೇಡಿಕೆಗನುಸಾರವಾಗಿ ಹೆಚ್ಚುವರಿ ಬಸ್ಸುಗಳ ಸೇರ್ಪಡೆಗೆ ಯೋಜಿಸಲಾಗಿದೆ. ಅಗತ್ಯಕ್ಕನುಸಾರ ಸಿಬ್ಬಂದಿ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ.
ಕೆಲವೊಂದು ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದಲ್ಲಿ, ಬಸ್ಸುಗಳಿಗೆ ಬೇಡಿಕೆ ಅಧಿಕವಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಬಸ್ಸುಗಳ ಕೊರತೆ ನೀಗಿಸಲು ಅನುಸೂಚಿಗಳ ವೇಳಾಪಟ್ಟಿ/ಮಾರ್ಗ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ.
ಸಾರಿಗೆ ಇಲಾಖೆಯ ಹಣಕಾಸು ಸ್ಥಿತಿಗತಿ: ಏಪ್ರಿಲ್ 2022ರಿಂದ ಮಾರ್ಚ್ 2023ರ ವರೆಗೆ ನಾಲ್ಕು ಸಾರಿಗೆ ಸಂಸ್ಥೆಗಳ ಒಟ್ಟು ಸಾರಿಗೆ ಆದಾಯ 8,360 ಕೋಟಿ ರೂ. ಇತರೆ ಆದಾಯದ ಮೂಲಕ 586.63 ಸಂಗ್ರಹಿಸಿದೆ. ಸರ್ಕಾರದ ಸಹಾಯಧನ ಹಾಗೂ ಮರುಪಾವತಿ ಮೊತ್ತ ಸುಮಾರು 3,606.52 ಕೋಟಿ ರೂ. ಆಗಿದೆ. ಆ ಮೂಲಕ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಒಟ್ಟು 12,553.37 ಕೋಟಿ ರೂ. ಆದಾಯ ಗಳಿಸಿದೆ.
ರಸ್ತೆ ಸಾರಿಗೆ ನಿಗಮಗಳಿಗೆ ಆದ ಒಟ್ಟು ಕಾರ್ಯಾಚರಣೆ ವೆಚ್ಚ 12,750.49 ಕೋಟಿ ರೂ. ಈ ಪೈಕಿ ಸಿಬ್ಬಂದಿ ವೇತನ ವೆಚ್ಚ 6,087.31 ಕೋಟಿ ರೂ., ಇಂಧನ ವೆಚ್ಚ ಒಟ್ಟು 4,483.98 ಕೋಟಿ ರೂ. ಆಗಿದೆ. ಇತ್ತ ಸಾರಿಗೆ ಆದಾಯದ ಮೇಲಿನ ಒಟ್ಟು ನಷ್ಟ 4,390.27 ಕೋಟಿ ರೂ. ಒಟ್ಟು ಆದಾಯದ ಮೇಲೆ ಕಂಡ ನಷ್ಟ 197.12 ಕೋಟಿ ರೂ.
ಶಕ್ತಿ ಯೋಜನೆಯ ಫಲಾನುಭವಿಗಳು/ವೆಚ್ಚದ ವಿವರ: ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಈ ಶಕ್ತಿ ಯೋಜನೆಯಿಂದ ವಾರ್ಷಿಕ ಸುಮಾರು 4,051.56 ಕೋಟಿ ರೂ. ವೆಚ್ಚ ತಗುಲುತ್ತೆ ಎಂದು ಸಾರಿಗೆ ನಿಗಮಗಳು ಅಂಕಿಅಂಶ ನೀಡಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳ 18,609 ಬಸ್ ಗಳಲ್ಲಿ ನಿತ್ಯ 41.81 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡುತ್ತಾರೆ. ಇದರಿಂದ ಮಾಸಿಕ ತಗುಲುವ ವೆಚ್ಚ 337.63 ಕೋಟಿ ರೂ. ವಾರ್ಷಿಕವಾಗಿ ತಗುಲುವ ಒಟ್ಟು ವೆಚ್ಚ 4,051.56 ಕೋಟಿ ರೂ.
ಕೆಎಸ್ ಆರ್ ಟಿಸಿಯಲ್ಲಿ 6239 ಬಸ್ ಗಳಲ್ಲಿ ನಿತ್ಯ 14.43 ಲಕ್ಷ ಮಹಿಳೆಯರು ಓಡಾಡುತ್ತಾರೆ. ಮಾಸಿಕ ವೆಚ್ಚ 130.30 ಕೋಟಿ ರೂ. ಆಗಲಿದೆ. ಒಟ್ಟು ವಾರ್ಷಿಕವಾಗಿ ತಗುಲುವ ವೆಚ್ಚ 1,563.60 ಕೋಟಿ ರೂ. ಇತ್ತ ಬಿಎಂಟಿಸಿಯಲ್ಲಿನ 5,102 ಬಸ್ ಗಳಲ್ಲಿ ನಿತ್ಯ 10.86 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸುತ್ತಾರೆ. ಇದರ ಮಾಸಿಕ ವೆಚ್ಚ 64.18 ಕೋಟಿ ರೂ. ಆಗಿದ್ದು, ವಾರ್ಷಿಕ ತಗುಲುವ ಒಟ್ಟು ವೆಚ್ಚ 770.16 ಕೋಟಿ ರೂ. ಆಗಿದೆ.
ವಾಯುವ್ಯ ರಸ್ತೆ ಸಾರಿಗೆ ನಿಗಮಗಳ 3,892 ಬಸ್ ಗಳಲ್ಲಿ ನಿತ್ಯ 9.12 ಲಕ್ಷ ಮಹಿಳೆಯರು ಓಡಾಡುತ್ತಾರೆ. ಇದರಿಂದಾಗುವ ಮಾಸಿಕ ವೆಚ್ಚ ಸುಮಾರು 75.57 ಕೋಟಿ ರೂ. ಒಟ್ಟು ತಗುಲುವ ವಾರ್ಷಿಕ ವೆಚ್ಚ 906.84 ಕೋಟಿ ರೂ.,ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 3,376 ಬಸ್ ಗಳಲ್ಲಿ ನಿತ್ಯ 7.41 ಲಕ್ಷ ಮಹಿಳೆಯರು ಸಂಚರಿಸುತ್ತಾರೆ. ಇದಕ್ಕಾಗಿ 67.58 ಕೋಟಿ ರೂ. ಮಾಸಿಕ ವೆಚ್ಚವಾಗುತ್ತದೆ. ಒಟ್ಟು ವಾರ್ಷಿಕ ವೆಚ್ಚ 810.96 ಕೋಟಿ ರೂ.
ಇದನ್ನೂಓದಿ:Free Bus : 'ಶಕ್ತಿ ಯೋಜನೆ' ಸರ್ಕಾರಿ ಬಸ್ಗಳಿಗೆ ಮಾತ್ರ ಸೀಮಿತ, ಖಾಸಗಿ ಬಸ್ಗಳಿಗೆ ವಿಸ್ತರಣೆಯಿಲ್ಲ: ಸಚಿವ ದಿನೇಶ್ ಗುಂಡೂರಾವ್