ಬೆಂಗಳೂರು : ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಧಾಬಾಯಿ (34) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಚೆಲ್ಲಾಪಿಲ್ಲಿಯಾದ ವಸ್ತುಗಳು ಸೆಪ್ಟೆಂಬರ್ 17 ರಂದು ಮಾರತ್ತಹಳ್ಳಿಯ ಮುನ್ನೇನಕೊಳಲುನ ವಸಂತನಗರದಲ್ಲಿರುವ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸುಧಾಬಾಯಿ (34), ಅವರ ಪತಿ ಸೆಲ್ವ ನಾಯಕ್, ಮಕ್ಕಳಾದ ನಂದಿತಾ (15) ಹಾಗೂ ಮನೋಜ್ (12) ಗೆ ಗಾಯಗಳಾಗಿದ್ದವು. ಮಕ್ಕಳಿಬ್ಬರೂ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಪತಿ ಹಾಗೂ ಪತ್ನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸುಧಾಬಾಯಿ ಇಂದು ಸಾವನ್ನಪ್ಪಿದ್ದು, ಇತ್ತ ಸೆಲ್ವ ನಾಯಕ್ಗೆ ಚಿಕಿತ್ಸೆ ಮುಂದುವರೆದಿದೆ.
ಸಿಲಿಂಡರ್ ಸ್ಫೋಟದಿಂದ ಚೆಲ್ಲಾಪಿಲ್ಲಿಯಾದ ವಸ್ತುಗಳು ಚಾಮರಾಜನಗರ ಮೂಲದ ಸೆಲ್ವ ನಾಯಕ್ ಕುಟುಂಬ ಕಳೆದ 15 ವರ್ಷಗಳಿಂದ ನಗರದ ಮುನ್ನೆಕೊಳಲಿನ ವಸಂತ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿತ್ತು. ಸೆಲ್ವ ನಾಯಕ್ ಆಟೋದಲ್ಲಿ ಪಾದರಕ್ಷೆ ತುಂಬಿಕೊಂಡು ನಗರದ ವಿವಿಧೆಡೆ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 16ರಂದು ಊಟ ಮುಗಿಸಿ ಸೆಲ್ವ ನಾಯಕ್ ದಂಪತಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು. ಈ ವೇಳೆ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಆಫ್ ಮಾಡುವುದನ್ನು ಸುಧಾಬಾಯಿ ಮರೆತಿದ್ದರಿಂದ ಅನಿಲ ಸೋರಿಕೆಯಾಗಿತ್ತು. ಮಾರನೇದಿನ ಬೆಳಗ್ಗೆ ಎದ್ದ ಸುಧಾಬಾಯಿ, ಅಡುಗೆ ಮನೆ ಲೈಟ್ ಹಾಕಿದ ತಕ್ಷಣ ಸಿಲಿಂಡರ್ ಸ್ಫೋಟಗೊಂಡಿತ್ತು.
ಇದನ್ನೂ ಓದಿ:Cylinder blast: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ.. ಓರ್ವ ಸಾವು, ಇಬ್ಬರಿಗೆ ಗಾಯ
ಇತ್ತೀಚೆಗಷ್ಟೇ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಕ್ಕಯ್ಯ ಬಡಾವಣೆಯ ಪೊಲಮ್ಮಾಸ್ ಹೋಟೆಲ್ ಬಳಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ನಡೆದಿತ್ತು. ಮಲಗಿದ್ದ ರವಿ (40) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಚೋರ್ಲಾ ಹಾಗೂ ನಾಗರಾಜ್ ಎಂಬುವರಿಗೆ ಗಾಯಗಳಾಗಿತ್ತು. ಪೊಲಮ್ಮಾಸ್ ಮೆಸ್ ಪಕ್ಕದ ಬಿಲ್ಡಿಂಗ್ನ ಕೆಳಮಹಡಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಈ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಶೆಟರ್ ವರೆಗೂ ಸಿಲಿಂಡರ್ ಸಿಡಿದಿದ್ದು, ಶೆಟರ್ ಬಳಿ ಮಲಗಿದ್ದ ರವಿಗೆ ಬಂದು ಬಡೆದಿತ್ತು. ಪರಿಣಾಮ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ರಾಜಾಜಿನಗರದ ಮರಿಯಪ್ಪನಪಾಳ್ಯದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಿಂದ ಒಂದೇ ಕುಟುಂಬದ 10 ಜನರು ಗಾಯಗೊಂಡ ಘಟನೆ ನಡೆದಿತ್ತು.