ಬೆಂಗಳೂರು:ಜೈನ ಮಂದಿರಕ್ಕೆ ಭಕ್ತರ ಸೋಗಿನಲ್ಲಿ ತೆರಳಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದ ಮಹಿಳೆಯನ್ನು ನಗರದ ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಮುನ್ನಿ ಬಾನು (32) ಬಂಧಿತ ಮಹಿಳೆ. ಈಕೆ ಮೂಲ ಜೈನ ಧರ್ಮದವಳಾಗಿದ್ದು ಅನ್ಯಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು ಎನ್ನಲಾಗಿದೆ.
ಈಕೆಗೆ ಗೊತ್ತಿತ್ತು ಜೈನ ಸಂಪ್ರದಾಯ:
ಶಾಮಣ್ಣ ಗಾರ್ಡನ್‌ನಲ್ಲಿ ಪತಿ, ಮಕ್ಕಳ ಜತೆ ನೆಲೆಸಿದ್ದ ಆರೋಪಿ ಮಹಿಳೆ ಕುಟುಂಬ ಸಾಗಿಸಲು ಸುಲಭವಾಗಿ ಹಣ ಸಂಪಾದನೆ ಮಾಡುವ ಗೀಳಿಗೆ ಬಿದ್ದದ್ದಳು. ಜೈನ ಧರ್ಮದ ಸಂಪ್ರದಾಯ ಗೊತ್ತಿದ್ದ ಕಾರಣ ಜೈನ ಮಂದಿರಗಳನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ದುರ್ಗಾಷ್ಟಮಿ ಹಬ್ಬದ ದಿನ ಸಂಚು:
ಅ.16ರಂದು ಮಾಗಡಿ ರಸ್ತೆಯಲ್ಲಿರುವ ಜೈನ ಮಂದಿರದಲ್ಲಿ ನಡೆದಿದ್ದ ದುರ್ಗಾಷ್ಟಮಿ ಹಬ್ಬದ ಪ್ರಯುಕ್ತ ಬೆಳ್ಳಿಯ ಪೂಜಾ ಸಾಮಗ್ರಿಯನ್ನು ತೆಗೆದು ಹೊರಗಿಟ್ಟಿದ್ದರು. ಈ ವೇಳೆ ಭಕ್ತರ ಸೋಗಿನಲ್ಲಿ ದೇಗುಲ ಪ್ರವೇಶಿಸಿದ ಮುನ್ನಿ ಬಾನು ಯಾರಿಗೂ ಗೊತ್ತಾಗದಂತೆ ಅವುಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು.
ಸಿಸಿಟಿವಿಯಿಂದ ಪತ್ತೆ:
ಈ ಬಗ್ಗೆ ಇಂದಿರ ಚಂದ್ ಎನ್ನುವವರು ಕೊಟ್ಟ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇನ್‌ಸ್ಪೆಕ್ಟರ್ ಎಂ. ಸದಾನಂದ ನೇತೃತ್ವದ ತಂಡ ಜೈನ ಮಂದಿರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಲ್ಲಿನ ಸಿಸಿಟಿವಿಯ ಡಿವಿಆರ್ ವಶಪಡಿಸಿಕೊಂಡಿದ್ದರು. ಸಿಸಿಟಿವಿಯಲ್ಲಿ ಮುನ್ನಿ ಬಾನು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಕಂಡು ಬಂದಿದೆ. ಈ ಮೇರೆಗೆ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾಗ ಆರೋಪಿ ಸೆರೆಸಿಕ್ಕಿದ್ದಾಳೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಜೈನ ಮಂದಿರಗಳಲ್ಲಿ ಕಳ್ಳತನ:
ಕಳವು ಮಾಡಿದ್ದ 20 ಸಾವಿರ ರೂ. ಮೌಲ್ಯದ 379 ಗ್ರಾಂ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈಕೆ ಹಿಂದೆಯೂ ಮೂರು ಜೈನ ಮಂದಿರಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.