ಬೆಂಗಳೂರು: ರಾಜ್ಯದ 74 ಮಹಿಳಾ ಸಾಂತ್ವನ ಸಹಾಯವಾಣಿಗಳನ್ನು ಬಂದ್ ಮಾಡಿರುವ ಆದೇಶ ಹಿಂತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ ಸಂದರ್ಭದಲ್ಲಿ ಕೂಡಲೇ ಆದೇಶ ಹಿಂತೆಗೆದು ತಿದ್ದುಪಡಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೊಂದ ಮಹಿಳೆಯರ ಸಾಂತ್ವನಕ್ಕಾಗಿ ಸ್ವತಃ ರಾಜ್ಯ ಸರ್ಕಾರ 2001ರಲ್ಲಿ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮೂಲಕ 194 ಮಹಿಳಾ ಸಾಂತ್ವನ ಸಹಾಯವಾಣಿಗಳನ್ನು ಆರಂಭಿಸಿತ್ತು. ತಲಾ ಕೇಂದ್ರಕ್ಕೆ ಇಂತಿಷ್ಟು ಎಂದು ಅನುದಾನದ ನೆರವು ನೀಡುತ್ತಿತ್ತು. ಇದರಿಂದ ನೊಂದ ಮಹಿಳೆಯರ ಪರ ಯಾರು ನಿಂತುಕೊಳ್ಳದಿದ್ದರೂ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ನಿರ್ದೆಶನದಡಿ ಸಾಂತ್ವನ ಕೇಂದ್ರಗಳು ನೊಂದವರ ಬಾಳಲ್ಲಿ ಬೆಳಕು ಮೂಡಿಸಲು ಯತ್ನಿಸುತ್ತಿದ್ದವು.
ಆದರೆ ಈಗ ರಾಜ್ಯದ 194 ಸಾಂತ್ವನ ಕೇಂದ್ರಗಳ ಪೈಕಿ 71 ಕೇಂದ್ರಗಳನ್ನು ಏಪ್ರಿಲ್ 1ರಿಂದಲೇ ಬಂದ್ ಮಾಡಿದೆ ಎಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಡಾ.ಎಂ.ವಿಜಯಾ ಹಾಗೂ ಕಾರ್ಯದರ್ಶಿ ಎಂ. ಭೀಮಯ್ಯ ಮನವಿ ಮಾಡಿದರು.
ಇದನ್ನೂ ಓದಿ:ಸಾಂತ್ವನ ಕೇಂದ್ರಗಳನ್ನು ಮುಂದುವರೆಸಲು ಸಿಎಂ ಸೂಚನೆ