ಬೆಂಗಳೂರು:ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಮಹಿಳಾ ಕಂಡಕ್ಟರ್ ಮುಖವನ್ನು ಉಗುರುಗಳಿಂದ ಪರಚಿ ಗಾಯಗೊಳಿಸಿದ್ದಾರೆ. ಈ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬಿಎಂಟಿಸಿ ನಿರ್ವಾಹಕಿ ಸುಕನ್ಯಾ ಅವರು ಆರೋಪಿ ಪ್ರಯಾಣಿಕೆ ಮೋನಿಷಾ (29) ವಿರುದ್ಧ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿಯಾಗಿರುವ ಮೋನಿಷಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಚಿಕ್ಕಬಾಣವಾರ ನಿವಾಸಿ ಮೋನಿಷಾ ಬೆಳಿಗ್ಗೆ 10.30ರ ಸುಮಾರಿಗೆ ನಗರದ 8ನೇ ಮೈಲಿಯಿಂದ ದಾಸರಹಳ್ಳಿಗೆ ತೆರಳಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾರೆ. ನಿರ್ವಾಹಕಿ ಸುಕನ್ಯಾ, ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆಗ ಮೋನಿಷಾ, ಆಧಾರ್ ಕಾರ್ಡ್ ತೋರಿಸಲು ತಡ ಮಾಡಿದರು. ಇದರಿಂದ ಅಸಮಾಧಾನಗೊಂಡ ನಿರ್ವಾಹಕಿ, ಏರುಧ್ವನಿಯಲ್ಲಿ ಬೇಗನೇ ತೋರಿಸಬೇಕು ಎಂದು ಸೂಚಿಸಿದ್ದಾರೆ.