ಹಾಸನ: ಬೆಂಗಳೂರಿನಿಂದ ಹಾಸನಕ್ಕೆ ಹೊರಟಿದ್ದ ಬಸ್ ವೊಂದರಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ವದರಿಯಾಗಿದ್ದು, ಈ ಸಂಬಂಧ ನಾಪತ್ತೆಯಾದ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆ ನಾಪತ್ತೆ ಆಗಿದ್ದು ಹೇಗೆ? : ಬಸ್ನಲ್ಲಿ ತೆರಳುತ್ತಿದ್ದ ಹಾಸನದ ಪಂಕಜ ಎಂಬುವರು ತಮ್ಮ ಮೊಬೈಲ್ಅನ್ನು ದುಷ್ಕರ್ಮಿಗಳು ಕಸಿದುಕೊಳ್ಳುವ ಮುನ್ನ ತಮ್ಮ ಪತಿಗೆ ಫೋನ್ ಮಾಡಿ, ಕುಣಿಗಲ್ ಸಮೀಪ ಬಸ್ ನ್ನು ಯಾರೋ ದುಷ್ಕರ್ಮಿಗಳು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರಂತೆ.
ರಾಜಗೋಪಾಲ್ನಗರ, ಜಾಲಹಳ್ಳಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ದೂರು:ಈ ಸಂಬಂಧ ರಾಜಗೋಪಾಲ್ ನಗರ ಮತ್ತು ಜಾಲಹಳ್ಳಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪಂಕಜ ಅವರ ಪತಿ ದೂರು ದಾಖಲಿಸಿದ್ದು, ನಿನ್ನೆ ಮಧ್ಯಾಹ್ನದಿಂದ ಪೊಲೀಸರು ಬೆಂಗಳೂರಿನಿಂದ ಹಾಸನಕ್ಕೆ ಹೊರಟ ಕೆಎಎಸ್ಆರ್ಟಿಸಿ ಬಸ್ಗಳ ಮಾಹಿತಿ ಜೊತೆಗೆ, ಕೆಲವು ಖಾಸಗಿ ಬಸ್ಗಳ ಮಾಹಿತಿಯನ್ನೂ ಕೂಡಾ ಕಲೆಹಾಕಿದ್ದಾರೆ.
ನಾಪತ್ತೆಯಾದ ಮಹಿಳೆ ಪುತ್ರ ಹೇಳೋದೇನು?
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಕಜ ಅವರ ಪುತ್ರ ಧನಂಜಯ್, ಹಾಸನದ ನಿಟ್ಟೂರಿನಲ್ಲಿ ನನ್ನ ಸೋದರಮಾವನ ಮನೆಯಿದ್ದು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಅಮ್ಮ ಹೊರಟಿದ್ದರು. ನನ್ನ ತಂದೆಯೇ ರಾಜಗೋಪಾಲ ನಗರದಿಂದ ಜಾಲಹಳ್ಳಿ ಕ್ರಾಸ್ ಗೆ ಬಿಎಂಟಿಸಿ ಬಸ್ ನಲ್ಲಿ ಹತ್ತಿಸಿ ಕಳುಹಿಸಿದ್ದರು. ನಂತರ ಜಾಲಹಳ್ಳಿ ಕ್ರಾಸ್ ನಿಂದ ತಾಯಿಯು ಹಾಸನದ ಬಸ್ ಹತ್ತಿದ್ದಾರೆ. ಮಾರ್ಗಮಧ್ಯೆ ಕುಣಿಗಲ್ ಬಳಿ ದರೋಡೆಕೋರರು ಬಸ್ನಲ್ಲಿ ನನ್ನ ತಾಯಿ ಸೇರಿ ಸುಮಾರು ಹತ್ತು ಮಂದಿ ಪ್ರಯಾಣಿಕರ ಸಮೇತ ಬಸ್ ವಶಕ್ಕೆ ಪಡೆದು ಅರಣ್ಯ ಪ್ರದೇಶದ ಕಡೆ ತಿರುಗಿಸಿದ್ದಾರೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ದರೋಡೆಕೋರರು ಹೆದರಿಸಿ ಎಲ್ಲರ ಮೊಬೈಲ್ಗಳನ್ನು ಕಸಿದುಕೊಂಡಿರುವ ಬಗ್ಗೆ ಕೊನೆ ಬಾರಿ ನನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಧನಂಜಯ್ ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಸ್ಪಷ್ಟನೆ:
ಆದರೆ, ಕೆಎಸ್ಆರ್ಟಿಸಿ ಅಧಿಕಾರಿಗಳು ಮಾತ್ರ ಯಾವುದೇ ಬಸ್ ಹೈಜಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರು ನಗರ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಪ್ರತಿಕ್ರಿಯಿಸಿ, ಬಸ್ ಹೈಜಾಕ್ ಮಾಡಿರುವ ವಿಚಾರ ತಿಳಿದುಬಂದಿಲ್ಲ. ಮಹಿಳೆಯೊಬ್ಬರು ಜಾಲಹಳ್ಳಿಯಿಂದ ನಾಪತ್ತೆಯಾಗಿರುವುದಾಗಿ ದೂರು ಬಂದಿದ್ದು, ಈ ಬಗ್ಗೆ ಪೀಣ್ಯ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. .