ಬೆಂಗಳೂರು:ಸಿಗ್ನಲ್ ಜಂಪ್ ಮಾಡಿದ ಕಾರು ಚಾಲಕಿಗೆ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಎಎಸ್ಐ ಕೊರಳಪಟ್ಟಿ ಹಿಡಿದು ರಂಪಾಟ ನಡೆಸಿದರು.
ಟ್ರಾಫಿಕ್ ಎಎಸ್ಐ ಜತೆ ಮಹಿಳೆಯ ರಂಪಾಟ ಟ್ರಾಫಿಕ್ ಎಎಸ್ಐ ಬಸವಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಉತ್ತರಪ್ರದೇಶ ಮೂಲದ ಅಪೂರ್ವಿ ಡಿಯಾಸ್ ಎಂಬವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಮಧ್ಯಾಹ್ನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಎಎಸ್ಐ ಬಸವಯ್ಯ ಎಂಬುವರು ಕರ್ತವ್ಯದಲ್ಲಿದ್ದರು. ಈ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಮಹಿಳೆ ಸಿಗ್ನಲ್ ಜಂಪ್ ಮಾಡಿದ್ದಾರೆ. ಇದನ್ನು ಕಂಡು ಎಎಸ್ಐ ಕಾರು ಅಡ್ಡಗಟ್ಟಿ ದಂಡ ಪಾವತಿಸುವಂತೆ ಹೇಳಿದ್ದಾರೆ. ಇಷ್ಟಕ್ಕೇ ಕುಪಿತಗೊಂಡು ಮಹಿಳೆ, ರಂಪಾಟ ನಡೆಸಿದ್ದಾಳೆ.
ಇದನ್ನೂ ಓದಿ:ಅಮೋನಿಯ ಅನಿಲ ಸೋರಿಕೆಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರು ಸಾವು, ನಾಲ್ವರಿಗೆ ಗಾಯ
ಸಂಚಾರಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ ಎಎಸ್ಐಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಸಮವಸ್ತ್ರ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.